ರಾಸುಗಳನ್ನು ರೋಗದಿಂದ ಪಾರು ಮಾಡಿ

ರಾಸುಗಳನ್ನು ರೋಗದಿಂದ ಪಾರು ಮಾಡಿ
Published on

ಅರಸೀಕೆರೆ: ಪಶುಗಳಿಗೆ ಕಾಲುಬಾಯಿ ಜ್ವರ ಬರದಂತೆ ರೈತರು ಮುನ್ನೆಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ರೋಗ ನಿರೋಧಕ ಲಸಿಕೆ ಕೊಡಿಸುವುದರ ಮೂಲಕ ಅವುಗಳನ್ನು ಸಂಭವನೀಯ ರೋಗಗಳಿಂದ ಪಾರು ಮಾಡಬೇಕು ಎಂದು ಅಗ್ಗುಂದ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹನುಮಂತಪ್ಪ ಹೇಳಿದರು.

ಪಶು ವೈದ್ಯಕೀಯ ಇಲಾಖೆ ವತಿಯಿಂದ ತಾಲೂಕಿನ ಕಸಬಾ ಹೋಬಳಿಯ ಅಗ್ಗುಂದ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೋಗ ಲಕ್ಷಣ ಕಂಡು ಬಂದಲ್ಲಿ ಪಶು ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಬೇಕು. ಕಾಲುಬಾಯಿ ಜ್ವರ ಪೀಡಿತ ರಾಸುಗಳನ್ನು ಇತರ ರಾಸುಗಳಿಂದ ಪ್ರತ್ಯೇಕಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.

ಈ ಜ್ವರ ಉಂಟು ಮಾಡುವ ವೈರಸ್ ಗಾಳಿಯಲ್ಲಿ ಹರಡುವುದರಿಂದ ಜ್ವರಪೀಡಿತ ಹಸುಗಳನ್ನು ಓಡಾಡಲು ಬಿಡಬಾರದು. ಕಾಲುಬಾಯಿ ಜ್ವರ ಪೀಡಿತ ರಾಸುಗಳು ಉಳಿಸುವ ಮೇವನ್ನು ಬೇರೆ ರಾಸುಗಳಿಗೆ ಹಾಕಬಾರದು ಎಂದರು.

ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುತ್ತಿದ್ದೇವೆ. ನಮ್ಮ ಆಸ್ಪತ್ರೆ ವ್ಯಾಪ್ತಿಗೆ 21 ಹಳ್ಳಿಗಳು ಸೇರಿದ್ದು ಒಟ್ಟು 4200 ಜಾನುವಾರುಗಳಿವೆ. ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮ. ಅ.21 ರಿಂದ ಆರಂಭಗೊಂಡಿದ್ದು, ನವೆಂಬರ್ 20ರವರೆಗೆ ನಡೆಯಲಿದೆ ಎಂದು ಡಾ. ಹನುಮಂತಪ್ಪ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಂ.ಕವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಪಿ.ಮಂಜುಳಾ ಈಶ್ವರಪ್ಪ, ಹಿರಿಯ ಪಶು ಪರಿವೀಕ್ಷಕರಾದ ಬಸಮ್ಮ, ಅಮೃತೇಶ್ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net