

ಕಡೂರು: ಆಧುನಿಕ ತಂತ್ರಜ್ಞಾನದ ಆರ್ಭಟದಲ್ಲಿ ಗ್ರಾಮೀಣ ಕಲೆ, ಜನಪದ ಸಂಸ್ಕೃತಿ ಮರೆಯಾಗುತ್ತಿವೆ. ಸಾಮರಸ್ಯದ ಬದುಕಿನ ಪಾಠ ಹೇಳುವ ಜಾನಪದ ಸಾಹಿತ್ಯದ ರಕ್ಷಣೆಗೆ ಅಗತ್ಯವಿದೆ ಎಂದು ಸಾಹಿತಿ ಹೊಸೂರು ಪುಟ್ಟರಾಜು ತಿಳಿಸಿದರು.
ಗಿರಿಯಾಪುರ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ ಹಾಗೂ ಮಲ್ಲಿಕಾಂಬಾ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಆಷಾಢ ಮಾಸ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಸಂಸ್ಕೃತಿಯಲ್ಲಿ ವಾಸ್ತವ ಅಡಗಿದೆ. ಅದರ ಬೇರಿನ ಮಹತ್ವ ನಮ್ಮೆಲ್ಲರ ಮೂಲ ಸಂಸ್ಕೃತಿಯಾಗಿದೆ. ಅದರಲ್ಲಿ ಆಡಂಭರದ ತೋರಿಕೆಯಿಲ್ಲ. ಸತ್ಯ, ಧರ್ಮ, ನ್ಯಾಯ, ನಿಷ್ಠೆ, ಮಾನವೀಯತೆ, ತ್ಯಾಗ ಎಲ್ಲವೂ ಮಿಳಿತಗೊಂಡಿದೆ. ಒಳಿತನ್ನು ಪೋಷಿಸಿ ಕೆಡುಕನ್ನು ದೂರಮಾಡಿ ಸಹೋದರತ್ವ ಮತ್ತು ಸಮನ್ವಯ ಭಾವನೆ ಹರಡುವ ಜಾನಪದ ಸಂಸ್ಕೃತಿಯ ಮಹತ್ವ ಯುವಪೀಳಿಗೆಗೆ ಬಿತ್ತುವ ಕಾರ್ಯವಾಗಬೇಕು. ಜಾನಪದದ ಪುನರುಜ್ಜೀವನವಾದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ತಾಲೂಕಿನಲ್ಲಿ ಜಾನಪದ ಭಂಡಾರವೇ ಇದೆ. ವೀರಗಾಸೆ, ಗೀಗೀಪದ, ಅಸಾದಿ ಪದಗಳು, ತೊಗಲು ಬೊಂಬೆ ಮುಂತಾದ ಕಲಾಪ್ರಕಾರಗಳನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ಜಾನಪದ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಪರಿಷತ್ತಿನ ಮಹಿಳಾ ಘಟಕದ ಉಪಾಧ್ಯಕ್ಷೆ ಸುನೀತಾ ಜಗದೀಶ್ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಅನ್ಯ ಸಂಸ್ಕೃತಿಯ ಆಕರ್ಷಣೆಯಲ್ಲಿ ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸ್ವಂತಿಕೆ ಉಳಿಯಬೇಕೆಂದರೆ ಜಾನಪದ ಉಳಿಯಬೇಕು ಎಂದರು.
ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಾನಪದ ಪರಿಷತ್ತಿನ ಮೂಲಕ ಗ್ರಾಮೀಣ ಭಾಗದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ನಮ್ಮ ಗ್ರಾಮೀಣ ಬದುಕಿನ ಜೀವಾಳವಾದ ಜಾನಪದ ಸಂಪತ್ತು ಉಳಿಸುವಲ್ಲಿ ಪರಿಷತ್ತು ನಿರಂತರ ಕೈಂಕರ್ಯ ಸಲ್ಲಿಸುತ್ತಿದೆ. ಈ ನಿಟ್ಟಿನಲ್ಲಿ ಆಷಾಢ ಮಾಸದ ಜನಪದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಲು ವಿವಿಧ ರೂಪಕವಾಗಿ ಸಂಸ್ಕೃತಿಯ ಉಳಿವಿಗೆ ಪರಿಷತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಹಿರಿಯ ಜಾನಪದ ಕಲಾವಿದ ಮಾಳೇನಹಳ್ಳಿ ಬಸಪ್ಪ, ಜಿ.ಪಿ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ಉಪಾಧ್ಯಕ್ಷ ಗೊಂಡೆಹಳ್ಳಿ ತಿಪ್ಪೇಶ್, ತಾಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್, ಗ್ರಾಮದ ಹಿರಿಯ ಜಿ.ಪಿ.ಪ್ರಭುಕುಮಾರ್, ಮಲ್ಲಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾಮಣಿ, ಚಿಕ್ಕನಲ್ಲೂರು ಜಯಪ್ಪ, ರಾಜಪ್ಪ, ಭಾಗ್ಯಾ, ನಳಿನಾ, ಶೀಲಾ, ಪ್ರೇಮಾ, ಪಾರ್ವತಮ್ಮ ಇದ್ದರು.