

ದೇವದುರ್ಗ: ಮನುಷ್ಯನಿಗೆ ಪಂಚೇಂದ್ರಿಯಗಳು ಅತ್ಯವಶ್ಯವಾಗಿದ್ದು, ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಐದು ಇಂದ್ರಿಯಗಳಲ್ಲಿ ಶ್ರವಣ ಅತ್ಯಂತ ಪ್ರಮುಖ ಅಂಗವಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಮಕ್ಕಳು ನೋಡಿ ಕಲಿಯುವ ಹಾಗೂ ಕೇಳಿ ತಿಳಿಯುವುದು ರೂಢಿ. ವಯೋಸಹಜ ಕಾರಣ, ಅಪಘಾತ, ಅತಿಯಾದ ಮೊಬೈಲ್ ಬಳಕೆ, ಶಬ್ದ ಮಾಲಿನ್ಯದಿಂದ ಶ್ರವಣದೋಷ ಉಂಟಾಗುತ್ತದೆ.
ಟಿವಿ, ರೇಡಿಯೋ, ಮೊಬೈಲ್ ಶಬ್ದ ದಿನೇದಿನೆ ಕಡಿಮೆ ಕೇಳಿಸುವುದು, ಮಾತು ಸ್ಪಷ್ಟವಾಗಿ ಕೇಳಿಸದೆ ಇರುವ ಲಕ್ಷಣಗಳು ಗೋಚರಿಸಿದರೆ ಶ್ರವಣ ತಜ್ಞರಲ್ಲಿ ಪರೀಕ್ಷಿಸಿಕೊಂಡರೆ ಶೇ.50 ಸಮಸ್ಯೆಯನ್ನು ತಡೆಗಟ್ಟಬಹುದು. ಶಬ್ದ ಮಾಲಿನ್ಯದಿಂದ ಶ್ರವಣ ದೋಷ ಪ್ರಕರಣಗಳು ಏರಿಕೆಯಾಗುತ್ತಿವೆ.
ಮೈಕ್, 60ಕ್ಕೂ ಅಧಿಕ ಡಿಸಿಬಲ್ ಬಳಕೆಯಿಂದ ಕಿರಿಯ ವಯಸ್ಸಿನಲ್ಲಿ ಶ್ರವಣ ದೋಷಕ್ಕೆ ಒಳಗಾಗುತ್ತಿದ್ದಾರೆ. ಕಿವಿಯ ರಚನೆ ಹಾಗೂ ಗಟ್ಟಿಯಾದ ಆಹಾರ ಪದಾರ್ಥ ಅಗಿಯುವಾಗ ಸ್ವಾಭಾವಿಕವಾಗಿ ಉಂಟಾಗುವ ದವಡೆಯ ಚಲನದಿಂದಾಗಿ ಸಣ್ಣ ಕುಗ್ಗೆ ಕಣಗಳು ತಾನಾಗಿಯೇ ಹೊರಬರುತ್ತವೆ. ಕಿವಿಗೆ ಎಣ್ಣೆ ಹಾಕುವುದು ಅನಗತ್ಯವಾಗಿ ಕಡ್ಡಿ, ಪಿನ್ನು, ಬರ್ಡ್ಸ್‌ಗಳನ್ನು ಬಳಸಿದರೆ ಕೊಳೆ ಕಣ ಹಿಂದೆ ಸರಿದು ಕಿವಿ ಒಳಗೆ ಸೋಂಕು ಉಂಟಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದರು.