

ವಿಜಯಪುರ: ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅಗತ್ಯ. ನಮ್ಮ ಸುಂದರ ಬದುಕಿಗೆ ಪರಿಸರವನ್ನು ಪೋಷಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆ ನೂತನ ಆವರಣದಲ್ಲಿರುವ ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಹಸಿರು ಸಿರಿ ಟಕ, ವೃಕ್ಷ ಅಭಿಯಾನ ಪ್ರತಿಷ್ಠಾನ ಮತ್ತು ಅರಣ್ಯ ಇಲಾಖೆ, ಮಹಾ ವಿದ್ಯಾಲಯದ ಮಹಿಳಾ ಸಬಲೀಕರಣ ಟಕದ ಸಹಯೋಗದಲ್ಲಿ ಶನಿವಾರ ನಡೆದ ಹಸಿರು ಸಿರಿ ಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡಿದರು.
ನಮ್ಮ ಮೂಲ ಅವಶ್ಯಕತೆಗಳಾದ ಗಾಳಿ, ನೀರು ಅದರಂತೆ ವೃಕ್ಷವೂ ಪ್ರಮುಖ ಪಾತ್ರ ವಹಿಸುತ್ತದೆ. ಮಹಾವಿದ್ಯಾಲಯದ ಆವರಣದಲ್ಲಿ ಮೂವತ್ತಕ್ಕೂ ವಿವಿಧ ಪ್ರಭೇದಗಳ ಒಟ್ಟು ಎರಡು ನೂರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಪ್ರತಿಯೊಬ್ಬರು ಗಿಡಗಳನ್ನು ಪೋಷಿಸಿ ಸುಂದರ ಪರಿಸರವಾಗುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಆರ್.ಎಂ. ಮಿರ್ದೆ, ಪಿಯುಸಿ ಪ್ರಾಚಾರ್ಯ ಪ್ರೊ. ಸಿ.ಬಿ. ಪಾಟೀಲ, ಡಾ. ಎಂ.ಬಿ.ಪಾಟೀಲ, ಧೃವ ಎಂ. ಪಾಟೀಲ, ವೃಕ್ಷ ಅಭಿಯಾನ ಪ್ರತಿಷ್ಠಾನದ ಸಂಯೋಜಕ ಪ್ರೊ. ಮುರಗೇಶ ಪಟ್ಟಣಶೆಟ್ಟಿ, ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ, ಮಹಿಳಾ ಸಬಲೀಕರಣ ಟಕದ ಪ್ರೊ. ವಿದ್ಯಾ ಪಾಟೀಲ, ಆರ್.ಡಿ. ಜೋಶಿ, ಶ್ವೇತಾ ಸವನೂರ, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತಿತರರಿದ್ದರು.