

ತರೀಕೆರೆ: ಜಿಲ್ಲಾಸ್ಪತ್ರೆ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೋಷನ್ ಪದಾಧಿಕಾರಿಗಳು ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ಎಸಿ ಡಾ. ಕೆ.ಜೆ.ಕಾಂತರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಟಿ.ಎಂ.ದೇವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆ ಕೀಲು ಮತ್ತು ಮೂಳೆ ತಜ್ಞ ಡಾ. ವೆಂಕಟೇಶ್ ಮೇಲಿನ ಹಲ್ಲೆ ವೈದ್ಯ ಸಮೂಹವನ್ನು ಆತಂಕಕ್ಕೆ ತಳ್ಳಿದೆ. ಕಾನೂನಿನ ವೈಫಲ್ಯದಿಂದ ಇಂಥ ಹಲ್ಲೆಗಳು ನಡೆಯುತ್ತಿದ್ದು, ಇದರಿಂದ ವೈದ್ಯ ಸಮೂಹದ ಮನೋಸ್ಥೈರ್ಯ ಕುಗ್ಗುತ್ತಿದೆ ಎಂದರು.
ಕರ್ತವ್ಯನಿರತ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ಭದ್ರತೆ ನೀಡಿ ಉತ್ತಮ ಆರೋಗ್ಯ ಸೇವೆ ನೀಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ವೈದ್ಯರಾದ ದೀಪಕ್, ಚನ್ನಬಸಪ್ಪ, ಸಂತೋಷ್, ಮಹಮದ್ ಸಾಧಿಕ್, ಜಿ.ಸಿ.ಶರತ್, ಶ್ರೀನಿವಾಸ್, ಮೋಹನ್, ನಾಗರಾಜ್, ಗೀತಾ, ಭಾಗ್ಯಲಕ್ಷ್ಮೀ, ಆರ್.ಪ್ರಸನ್ನ ಇತರರಿದ್ದರು.