

ತಾಳಿಕೋಟೆ: ಜೆಡಿಎಸ್ ಶಾಸಕರ‌್ಯಾರು ಇಲ್ಲಿ ಕಾಂಗ್ರೆಸ್‌ಗೆ ಹೋಗಲು ಹಸಿದು ಕುಳಿತಿಲ್ಲ. ನೂತನ ಶಾಸಕ ಸಿ.ಪಿ. ಯೋಗೇಶ್ವರ ತಮ್ಮ ಗೆಲುವಿನ ಹುಮ್ಮಸ್ಸಿನಿಂದ ಹೊರಬಂದು ತಮ್ಮಪಕ್ಷದ ಅತೃಪ್ತ ಶಾಸಕರ ಬಗ್ಗೆ ಗಮನಹರಿಸಲಿ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ (ಕು. ಸಾಲವಾಡಗಿ) ಅವರು ಯೋಗೇಶ್ವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೆ ಒಳಪಟ್ಟು ಶಾಸಕರನ್ನಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸಿ.ಪಿ.ಯೋಗೇಶ್ವರ ಅವರು ಹಣ, ಹೆಂಡ, ಸರ್ಕಾರಿ ಯಂತ್ರಗಳನ್ನು ಬಳಕೆ ಮಾಡಿ ಆಯ್ಕೆಯಾಗಿ ಇನ್ನೂ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕೂಡಾ ಸಮರ್ಥವಾಗಿ ನಮ್ಮ ಕಾರ್ಯವನ್ನು ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು.
ಆದರೆ ಕಾಂಗ್ರೆಸ್ ಪಕ್ಷದ ಸಾಕಷ್ಟು ಶಾಸಕರು ಅನುದಾನ ಸಿಗುತ್ತಿಲ್ಲವೆಂದು ಅವರದ್ದೇ ಪಕ್ಷ ಹಾಗೂ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮೊದಲು ಅವರನ್ನು ತಮ್ಮ ಪಕ್ಷದಲ್ಲಿ ಉಳಿಸಿಕೊಳ್ಳುವುದನ್ನು ನೋಡಲಿ. ಅದನ್ನು ಬಿಟ್ಟು ಮತ್ತೊಂದು ಪಕ್ಷದ ಶಾಸಕರನ್ನು ಕರೆತರುವ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಯೋಗೇಶ್ವರ್ ಅವರಿಗೆ ಜೆಡಿಎಸ್ ಶಾಸಕರ‌್ಯಾರು ಅವರ ಸಂಪರ್ಕಕ್ಕೆ ಬಂದಿದ್ದರೆ ಮೊದಲು ಅವರ ಹೆಸರನ್ನು ಬಹಿರಂಗಪಡಿಸುವ ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದರೂ ಎಲ್ಲ ಶಾಸಕರು ಮಾಜಿ ಪ್ರಧಾನಿ ದೇವೇಗೌಡರ ಮತ್ತು ಕುಮಾರಸ್ವಾಮಿ ಅವರ ಜೊತೆಯಲ್ಲಿದ್ದಾರೆ ಯೋಗೇಶ್ವರರಂತೆ ಅಧಿಕಾರದ ಲಾಲಸೆತನಕ್ಕೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವಂತವರು ಯಾರೂ ಇಲ್ಲವೆಂದು ತಿರುಗೇಟು ನೀಡಿದರು.