ಮಡಿಕೇರಿಯಲ್ಲಿ ಜನ ಜಾತ್ರೆ

17mdk02
Published on

ಮಡಿಕೇರಿ:
ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಬಲಾಬಲ ಪ್ರದರ್ಶನಕ್ಕೆ ಮಡಿಕೇರಿ ಸಾಕ್ಷಿಯಾಯಿತು. ಪುಟ್ಟ ಪಟ್ಟಣ ಮಡಿಕೇರಿಯಲ್ಲಿ ಎಲ್ಲಿ ನೋಡಿದರಲ್ಲಿ ಪಕ್ಷಗಳ ಬಾವುಟ ಹಿಡಿದ ಜನರೇ ಕಂಡು ಬರುತ್ತಿದ್ದರು. ಮಧ್ಯಾಹ್ನದ ವೇಳೆಗೆ ಬಹುತೇಕ ಹೊಟೇಲ್‌ಗಳಲ್ಲಿ ಊಟ ಖಾಲಿ ಆಗಿತ್ತು.

ದಸರಾ ವೇಳೆಗೆ ಮಡಿಕೇರಿಯಲ್ಲಿ ರಾತ್ರಿ ವೇಳೆ ಜನಸಂದಣಿ ಕಂಡುಬರುತ್ತಿತ್ತು. ಆದರೆ ಚುನಾವಣೆ ಜ್ವರದ ಈ ದಿನಗಳಲ್ಲಿ ಮಡಿಕೇರಿ ಹಗಲಲ್ಲೂ ಭರ್ತಿ ಆಗಿತ್ತು. ಸೋಮವಾರ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಇದ್ದ ಕಾರಣ ನಗರದ ಪ್ರಮುಖ ಬೀದಿಗಳು ತುಂಬಿ ಹೋಗಿದ್ದವು. ಕುಶಾಲನಗರದಿಂದ ಮಡಿಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೨೭೫ ಸೇರಿದಂತೆ ಜಿಲ್ಲಾ ಕೇಂದ್ರ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು. ನಗರ ಪ್ರವೇಶಿಸಿಸುವ ಪ್ರಮುಖ ದ್ವಾರಗಳಲ್ಲಿ ಪೊಲೀಸರ ತಪಾಸಣೆ ನಂತರ ವಾಹನಗಳು ಮಡಿಕೇರಿ ಪ್ರವೇಶಿಸಬೇಕಿತ್ತು.

ಬೆಳಗ್ಗೆ ೧೧.೩೦ರ ಸುಮಾರಿಗೆ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮಡಿಕೇರಿ ವೇದಿಕೆಯಾಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧೆಡೆಯಿಂದ ವಾಹನಗಳಲ್ಲಿ ಆಗಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮಾರುಕಟ್ಟೆ ಬಳಿಯ ಶ್ರೀ ಚೌಡೇಶ್ವರಿ ದೇವಾಲಯ ಬಳಿ ಜಮಾಯಿಸಿ ನಂತರ ಅಲ್ಲಿಂದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಬೃಹತ್ ರೋಡ್ ಶೋದಲ್ಲಿ ಭಾಗವಹಿಸಿದರು. ಮಹದೇವಪೇಟೆ, ಚೌಕಿ, ಹಳೆಯ ಖಾಸಗಿ ಬಸ್ ನಿಲ್ದಾಣ, ಕೋಟೆ, ಟೌನ್ ಹಾಲ್ ಮಾರ್ಗವಾಗಿ ಗಾಂಧಿ ಮೈದಾನ ತನಕ ರೋಡ್ ಶೋ ನಡೆಸಲಾಯಿತು. ಕೇರಳ ಚೆಂಡೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಜೊತೆ ಸಾಗಿದ ರೋಡ್‌ಶೋ ಗಮನ ಸೆಳೆಯಿತು. ಬಿಜೆಪಿ, ಪಕ್ಷದ ಹಿರಿಯ ಮುಖಂಡರು ಹಾಗೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರ ಘೋಷಣೆಗಳು ಕೇಳಿಬಂದವು. ಪಕ್ಷದ ಮಡಿಕೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ರೋಡ್ ಶೋ ವೇಳೆ ಅಪ್ಪಚ್ಚು ರಂಜನ್ ಅವರ ಜೊತೆ ಹಾಜರಿದ್ದು ಒಗ್ಗಟ್ಟನ್ನು ಪ್ರದರ್ಶಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಕೂಡ ಮಧ್ಯಾಹ್ನ ಸುಮಾರು ೧೨.೩೦ರ ವೇಳೆಗೆ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯಿಂದ ಕಾಂಗ್ರೆಸ್ ಮುಖಂಡರು, ದೊಡ್ಡ ಸಂಖ್ಯೆಯ ಆಭಿಮಾನಿಗಳ ಶ್ರೀ ಚೌಡೇಶ್ವರಿ ದೇವಾಲಯದಿಂದ ರೋಡ್ ಶೋ ಆರಂಭಿಸಿ ಮಾರುಕಟ್ಟೆ, ಚೌಕಿ, ಹಳೆಯ ಬಸ್ ನಿಲ್ದಾಣ, ಕೋಟೆ, ನಗರಸಭೆ ಮೂಲಕ ಗಾಂಧಿ ಮೈದಾನದ ತನಕ ಸಾಗಿ ಬಂದರು. ಕಾಂಗ್ರೆಸ್ ರೋಡ್ ಶೋ ವೇಳೆಯೂ ಪಕ್ಷದ ಒಗ್ಗಟ್ಟು ಪ್ರದರ್ಶನದ ಪ್ರಯತ್ನ ನಡೆಯಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಅಭ್ಯರ್ಥಿ ಮಂಥರ್ ಗೌಡ ಪರ ಅಭಿಮಾನಿಗಳು ಘೋಷಣೆ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net