

ಬೆಂಗಳೂರು: ಪ್ರಬುದ್ಧತೆ, ಪ್ರಗತಿಪರವಾದ ಆಲೋಚನೆಗಳಿರುವ ಸಮುದಾಯಗಳಿಂದ ಸಮೃದ್ಧಿ ಕಾಣಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾ.ಪಂ. ಗ್ರಂಥಾಲಯದಲ್ಲಿ ಶನಿವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರೆ ಉತ್ತಮ ದೇಶ ನಿರ್ಮಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸವೆಂಬ ನೆಲ್ಸನ್ ಮಂಡೇಲಾ ಅವರ ನುಡಿಯನ್ನು ನೆನಪಿಸಿ, ಮಕ್ಕಳು ಹೆಚ್ಚೆಚ್ಚು ಓದಿ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಆಶಿಸಿದರು.
ಉನ್ನತ ಅಧಿಕಾರಿಗಳು ಆಗಿಂದಾಗ್ಗೆ ಹಳ್ಳಿ ಶಾಲೆಗಳಿಗೆ ಭೇಟಿ ನೀಡಬೇಕು. ಆ ಮೂಲಕ ಅಲ್ಲಿ ಕಲಿಯುವ ಮಕ್ಕಳಿಗೆ ಪ್ರೇರಣೆ ನೀಡಿ, ಮಾದರಿಯಾಗಬೇಕು. ದೊಡ್ಡಜಾಲ ಶಾಲೆಯ ಮಕ್ಕಳ ಕೋರಿಕೆಯಂತೆ ವೈಯಕ್ತಿಕ ವೆಚ್ಚದಲ್ಲಿ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುವೆ ಎಂದು ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
ಗ್ರಂಥಾಲಯ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೊಸದಾಗಿ ಎರಡು ಮಹಡಿ ನಿರ್ಮಿಸಲು 25 ಲಕ್ಷ ರೂ. ಒದಗಿಸುವ ಭರವಸೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಗ್ರಂಥಾಲಯದ ಬಳಕೆಗಾಗಿ ಶಿಕ್ಷಣ ಪಿಡಿಯಾ, ಪುಸ್ತಕಗಳು, ಕಥೆಗಳು, ಕೌಶಲ್ಯಾಧಾರಿತ ವಿಡಿಯೋಗಳು ಹಾಗೂ ಟ್ಯಾಬ್‌ಗಳನ್ನು ಹಸ್ತಾಂತರಿಸಿದರು.
ಓದುವ ಬೆಳಕು ಪುಸ್ತಕಗಳ ಮೊದಲ ಕಿಟ್ ವಿತರಿಸಿದರು. ಇದಕ್ಕೂ ಮುನ್ನ ಗ್ರಂಥಾಲಯ ಪಿತಾಮಹ ಎಸ್.ವಿ.ರಂಗನಾಥನ್ ಭಾವಚಿತ್ರಕ್ಕೆ ಪ್ರಿಯಾಂಕ್ ಖರ್ಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದ ನಂತರ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ ಗ್ರಾ.ಪಂ. ಅಧ್ಯಕ್ಷ ಹಾಗೂ ಸದಸ್ಯರ ಜತೆಗೆ ಚರ್ಚಿಸಿದರು.
ಗ್ರಾ.ಪಂ. ಅಧ್ಯಕ್ಷ ಆರ್.ಭೈರೇಗೌಡ, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಜಿ.ಪಂ. ಸಿಇಒ ಸಂಗಪ್ಪ, ಗ್ರಂಥಾಲಯ ಮೇಲ್ವಿಚಾರಕಿ ಸುವರ್ಣಮ್ಮ ಇನ್ನಿತರರು ಇದ್ದರು.