ಮಾತು, ಪ್ರಾಣ, ಮನಸುಗಳಿಗೆ ಸಂಸ್ಕಾರದಿಂದ ಅಭ್ಯುದಯ

19sirsi2
Published on

ಶಿರಸಿ: ಜಪ, ಪೂಜೆ, ಅರ್ಚನೆಗಳಿಂದ ನಮ್ಮ ಒಳಗಿನ ಮೂರು ಕರಣಗಳಿಗೆ ಸಂಸ್ಕಾರಗಳು ಆಗುತ್ತವೆ. ತ್ರಿಕರಣಗಳು ಮಾತು, ಪ್ರಾಣ ಮತ್ತು ಮನಸು ಈ ಮೂರು ಕರಣಗಳಿಗೆ ಸಂಸ್ಕಾರಗಳು ಅತ್ಯಂತ ಅವಶ್ಯಕ ಮತ್ತು ಅಷ್ಟೇ ಮಹತ್ವವೂ ಆಗಿದೆ. ಇವುಗಳಿಗೆ ಸಂಸ್ಕಾರವನ್ನು ನೀಡುವ ಪ್ರಯತ್ನ ಆಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಅವರು ಶ್ರೀಮಠದಲ್ಲಿ ಸಂಕಲ್ಪಿತ ಚಾತುರ್ವಸ್ಯ ವ್ರತಾಚರಣೆಯಲ್ಲಿ ಶಾಂತಪುರ ಸೀಮೆಯ ಶಿಷ್ಯರಿಂದ ಸೇವೆ ಸ್ವೀಕರಿಸಿ ಮಾತನಾಡಿದರು.

ನಾವು ಎಷ್ಟೇ ಜನ್ಮ ಎತ್ತಿದರೂ ಮಾತು, ಮನಸು ಮತ್ತು ಪ್ರಾಣ ಈ ಮೂರು ಕರಣಗಳು ನಮ್ಮ ಜೊತೆಯಲ್ಲಿಯೇ ಇರುತ್ತವೆ. ಹೊರಗಿನ ಇಂದ್ರಿಯಗಳು ಮಾತ್ರ ಬೇರೆ ಆಗುತ್ತವೆ. ಆದರೆ ಒಳಗಿನ ಈ ಕರಣಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ. ನಾವು ಮೋಕ್ಷ ಎಂಬ ಪರಮ ಪುರುಷಾರ್ಥವನ್ನು ಹೊಂದುವವರೆಗೂ ನಮ್ಮ ಜೊತೆಯಲ್ಲಿ ಇರುತ್ತವೆ ಎಂದರು.

ಪ್ರಾಣಾಯಾಮದ ಮೂಲಕ ಈ ಪ್ರಾಣವಾಯುವನ್ನು ನಿಯಂತ್ರಿಸುವ ಸಾಮರ್ಥ್ಯ ಮನುಷ್ಯನಿಗೆ ಇದೆ. ಮನುಷ್ಯರ ಉಸಿರಾಟದಲ್ಲಿ ಪ್ರಾಣಾಯಾಮ ಮಾಡಬಹುದು. ಆದರೆ, ಪ್ರಾಣಿಗಳಿಗೆ ಈ ಪ್ರಾಣಾಯಾಮ ಇಲ್ಲ. ಅವುಗಳು ಸಹಜವಾಗಿ ಉಸಿರಾಡುತ್ತವೆ. ಆದರೆ, ಈ ನಿಯಂತ್ರಣ ಅವುಗಳಿಗೆ ತಿಳಿದಿಲ್ಲ. ಮನುಷ್ಯನು ಉಸಿರಾಟದ ಮೂಲಕ ಒಂದು ವಿಶಿಷ್ಟವಾದ ಚಟುವಟಿಕೆಯಲ್ಲಿ ತೊಡಗಬಹುದು. ಪ್ರಾಣಾಯಾಮದ ಮೂಲಕ ಪಾಪಗಳನ್ನು ಕಳೆದುಕೊಳ್ಳಬಹುದು. ಹೀಗೆ ಅನೇಕ ಉಪಯೋಗಗಳನ್ನು ಮನುಷ್ಯನು ಪ್ರಾಣದ ಮೂಲಕ ಪಡೆದುಕೊಳ್ಳಲು ಸಾಧ್ಯ ಎಂದರು.

ಮನಸೆಂಬ ಸೂಕ್ಷ್ಮ ಇಂದ್ರಿಯ ಎಲ್ಲ ಪ್ರಾಣಿಗಳಿಗೂ ಇದೆ. ಆದರೆ, ಮನುಷ್ಯನ ಮನಸಿಗೂ ಪ್ರಾಣಿಗಳ ಮನಸಿಗೂ ತುಂಬ ವಿಭಿನ್ನತೆ ಇದೆ. ಅದರಲ್ಲಿ ಪ್ರಧಾನವಾದ ಒಂದು ವಿಭಿನ್ನತೆ ಎಂದರೆ ಮನುಷ್ಯನಿಗೆ ನಿನ್ನೆಗಳ ನೆನಪಾಗುತ್ತವೆ. ನಾಳೆಗಳ ಕಲ್ಪನೆ ಇದೆ. ತನ್ನ ಮುಂದಿನ ಭವಿಷ್ಯದ ಚಿಂತನೆ ಮಾಡುತ್ತಾನೆ. ಪ್ರಾಣಿಗಳಿಗೆ ಅಂತಹ ಯಾವ ಚಿಂತನೆಗಳೂ ಬರುವುದಿಲ್ಲ ಎಂದರು.

ಹೀಗಾಗಿ ಮನುಷ್ಯನಿಗೆ ಈ ಮೂರು ಕರಣಗಳು ಭಗವಂತನಿಂದ ಕೊಡಲ್ಪಟ್ಟಿದೆ. ನಮ್ಮ ಎಲ್ಲ ಧರ್ವಚರಣೆಗಳು ಈ ಕರಣಗಳಿಗೆ ಸಂಸ್ಕಾರವನ್ನು ಉಂಟು ಮಾಡುವ ಕೆಲಸ ಮಾಡುತ್ತವೆ. ಶಾಸ್ತ್ರೋಕ್ತವಾದ ಧಾರ್ವಿುಕ ಆಚರಣೆಗಳು ಎಲ್ಲವೂ ಪುಣ್ಯಗಳನ್ನೇ ಉಂಟು ಮಾಡುತ್ತವೆ, ಯಾವುದೂ ಪಾಪಗಳನ್ನು ಉಂಟು ಮಾಡುವುದಿಲ್ಲ. ಮಾತು, ಪ್ರಾಣ, ಮನಸುಗಳಿಗೆ ಸಂಸ್ಕಾರಗಳನ್ನು ನೀಡಿದರೆ ಏಕಾಗ್ರತೆಗೆ ಹೋಗುವ ಅಥವಾ ಅದಕ್ಕಿಂತ ಮುಂದಿನ ಹಂತಕ್ಕೆ ಏರುವ ಸಾಮರ್ಥ್ಯ ಬರುತ್ತದೆ. ಮನುಷ್ಯನಾಗಿ ಹುಟ್ಟಿ ಬಂದಿದ್ದು ಅಭ್ಯುದಯ, ನಿಶ್ರೇಯಸ್ಸಿನ ಕಡೆಗೆ ಹೋಗುವುದಕ್ಕೆ. ಅದಕ್ಕಾಗಿ ಎಲ್ಲರೂ ಅದರ ಕಡೆ ಮುಖ ಮಾಡಿ ನಮ್ಮ ಎಲ್ಲ ಪ್ರಯತ್ನ ಮಾಡುವುದರ ಮೂಲಕ ಪರಮಾತ್ಮನ ಸಾಯುಜ್ಯ ಪಡೆಯುವ ಹಾಗೆ ಆಗಬೇಕು ಎಂದರು.

ಪ್ರಮುಖರಾದ ವಿಶ್ವನಾಥ್ ಹೆಗಡೆ, ಗಣಪತಿ ಹೆಗಡೆ, ಶ್ರೀಕಾಂತ ಹೆಗಡೆ, ಗಣೇಶ ಭಟ್ ಇತರರು ಇದ್ದರು. ಶಿಷ್ಯರಿಂದ ಗಾಯತ್ರೀ ಅನುಷ್ಠಾನ, ಕುಂಕುಮಾರ್ಚನೆ, ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net