ಗ್ಯಾರಂಟಿ ಮೂಲಕ ಜನರ ಏಳಿಗೆ

h23-abbayya
Published on

ಹುಬ್ಬಳ್ಳಿ: ಸರ್ವರಿಗೂ ಸಮಬಾಳು, ಸಮಪಾಲು ಎಂಬ ಧ್ಯೇಯವಾಕ್ಯದಡಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ವಾರ್ಡ್ ಸಂಖ್ಯೆ 82ರ ಹೇಮರೆಡ್ಡಿ ಮಲ್ಲಮ್ಮ ಕಾಲನಿಯಲ್ಲಿ 30ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಬಡವರ ಮೇಲಿನ ಆರ್ಥಿಕ ಹೊರೆ ತಗ್ಗಿಸುವ ಕಾರ್ಯ ಮಾಡಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಲೇವಡಿ ಮಾಡುತ್ತಿದ್ದ ಬಿಜೆಪಿಯವರೂ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಆಸಕ್ತಿ ತೋರಿಸಿದ್ದು ಮರೆಯುವಂತಿಲ್ಲ. ಕರ್ನಾಟಕ ಮಾದರಿಯ ಕಾಂಗ್ರೆಸ್ ಆಡಳಿತದ ಸರ್ಕಾರವನ್ನು ಇಡೀ ದೇಶದ ಜನರು ಬಯಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಇಡೀ ದೇಶದ ಮೇಲೆ ಪ್ರಭಾವ ಬೀರಿವೆ ಎಂದರು.
ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ದೇಶದಲ್ಲೆಡೆ ಕಾಂಗ್ರೆಸ್ ಪರ ವಾತಾವರಣವಿದೆ. ಕಳೆದ 10ವರ್ಷಗಳ ಬಿಜೆಪಿ ದುರಾಡಳಿತ ಮತ್ತು ಅಧಿಕಾರಶಾಹಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ಮೋದಿ ಅವರು ಪುಂಖಾನು ಪುಂಖವಾಗಿ ದೇಶದ ಜನರಿಗೆ ನೀಡಿದ ಭರವಸೆಗಳು ಏನಾದವು? ಎಂಬುದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ದೇಶದ ಆರ್ಥಿಕತೆಯನ್ನು ಜಗತ್ತಿನ ನಂಬರ್‌ಒನ್ ಮಾಡಲು ಹೋಗಿ ದೇಶದ ಸ್ಥಿತಿ ಅಧೋಗತಿಗೆ ತಳ್ಳಿದವರನ್ನು ಇಂದು ಪ್ರಶ್ನೆ ಮಾಡಬೇಕು. ಜಿಎಸ್‌ಟಿ ಮೂಲಕ ಅತ್ಯಂತ ದುಬಾರಿ ತೆರಿಗೆಯ ಹೊರೆ ಹಾಕುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿ ಮಧ್ಯಮ ವರ್ಗ ಮತ್ತು ಬಡವರ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಿಲ್ಲ. ಕೇವಲ ಉಳ್ಳುವರು ಉಳಿದವರನ್ನು ಆಳುವ ಗುಲಾಮ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ದೇಶದಲ್ಲಿ ಕಾಂಗ್ರೆಸ್ ಆಡಳಿತ ಸನಿಸಹಿತ ಎಂದು ಭವಿಷ್ಯ ನುಡಿದರು.
ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ, ಮುಖಂಡರಾದ ಸಿದ್ದಪ್ಪ ಮೇಟಿ, ಮಂಜುನಾಥ ಅಡವಿ, ಲಕ್ಷ್ಮಣ ಬಡಿಗೇರ, ಮುತ್ತು ಕರಡ್ಡಿ, ಬಸವರಾಜ ರೋಕ್ಷ್ಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net