ಬೆಂಬಲ ಬೆಲೆಯಿಂದ ರೈತರ ಏಳಿಗೆ

SAVAYAVA
Published on

ಮುಂಡರಗಿ: ರೈತರ ಬೆಳೆಗಳಿಗೆ ಮೌಲ್ಯವರ್ದನೆ ದೊರೆಯಬೇಕು. ಬೆಳೆಗೆ ಬೆಂಬಲ ಬೆಲೆ ಸಿಕ್ಕರೆ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಯಾವುದೇ ಕಾರ್ಯಕ್ರಮವನ್ನು ಗೋವಿನ ಪೂಜೆ ಮಾಡುವುದರೊಂದಿಗೆ ಪ್ರಾರಂಭಿಸುವುದು ಶ್ರೇಷ್ಠ ಮತ್ತು ಸಸಿ ನೆಟ್ಟು ಜನುಮ ದಿನದ ಹಬ್ಬಗಳನ್ನು ಆಚರಿಸುವ ಪದ್ಧತಿ ಜಾರಿಗೆ ಬರಬೇಕು ಎಂದು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.

ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ 155ನೇ ಯಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾವಯವ ಕೃಷಿಗೋಷ್ಠಿ ಮತ್ತು ಸಿರಿಧಾನ್ಯಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಯವ ಕೃಷಿ ಲಾಭದಾಯಕವಲ್ಲ ಎಂದು ಅನೇಕ ರೈತರು ಸಾವಯವ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸಾವಯವ ಕೃಷಿ ಹಣದಿಂದ ಲಾಭದಾಯಕವಲ್ಲದಿದ್ದರು ಆರೋಗ್ಯಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಜಾನುವಾರಗಳು ಇದ್ದರೆ ಮಾತ್ರ ಸಾವಯವ ಕೃಷಿ ಮಾಡಲು ಹೆಚ್ಚು ಅನುಕೂಲಕರವಾಗುತ್ತದೆ ಎಂದರು.

ರೈತರಾದ ಕನಕಪ್ಪ ಕುರಿ, ಬಾಳಪ್ಪ ರಾಜನಾಳ, ಡಾ.ಬಸವರಾಜ ನಾವಿ, ಗುಡದಪ್ಪ ಲಿಂಗಶೆಟ್ಟರ, ಈರಣ್ಣ ಪ್ಯಾಟಿ ಇತರರು ಸಿರಿ ದಾನ್ಯಗಳ ಪ್ರದರ್ಶನ ಮಾಡಿದರು. ಸಿರಿದಾನ್ಯ ಪ್ರದರ್ಶನಕ್ಕೆ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಮತ್ತು ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಶೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಕುರಿಯವರ ಅವರನ್ನು ಸನ್ಮಾನಿಸಲಾಯಿತು. ಶಶಿಧರ ಶಾಸ್ತ್ರಿಗಳು ವಚನ ದರ್ಶನ ಪ್ರವಚನ ನಡಿಸಿಕೊಟ್ಟರು. ಸೋಮನಾಥ ಗವಾಯಿಗಳು, ನಾಗಭೂಷಣ ಹಿರೇಮಠ ಸಂಗೀತ ನಡಿಸಿಕೊಟ್ಟರು.

ವಿ.ಜೆ.ಹಿರೇಮಠ, ನಾಗರಾಜ ಮುರಡಿ, ದೇವು ಹಡಪದ, ಶಿವು ವಾಲಿಕಾರ, ಮಂಜುನಾಥ ಇಟಗಿ, ದೇವಪ್ಪ ಇಟಗಿ, ಕಾಳಪ್ಪ ರಾಜನಾಳ, ಕೃಷಿ ಇಲಾಖೆ ತಾಂತ್ರಿಕ ಸಂಯೋಜಕ ಗೌರಿಶಂಕರ ಸಜ್ಜನರ ಇತರರು ಇದ್ದರು. ಎಸ್.ಆರ್.ರಿತ್ತಿ ಮತ್ತು ಎಸ್.ಎಸ್.ಇನಾಮತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net