

ಬ್ಯಾಡಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಬಡವರು ಸೇರಿ ಎಲ್ಲ ವರ್ಗದವರ ಏಳಿಗೆಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದೇವೆ. ಗ್ಯಾರಂಟಿ ಯೋಜನೆ ರಾಜ್ಯದ ಮನೆಮನೆಗಳನ್ನು ತಲುಪುವ ಮೂಲಕ ಎಲ್ಲ ಫಲಾನುಭವಿಗಳಿಗೆ ಲಾಭ ದೊರಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕು ಕಾಂಗ್ರೆಸ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬೆಳಗಾವಿಯ ಶತಮಾನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ತೆರಳಲು ಪೂರ್ವಭಾವಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಧಿವೇಶನ ಜರುಗಿದ್ದು, 2024 ಡಿ. 26ಕ್ಕೆ ಶತಮಾನ ಸಂಭ್ರಮ ದಿನವಾಗಿದೆ. ಆ ಸಭೆಗೆ ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಈಗಿನ ಬೆಳಗಾವಿ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸುತ್ತಿರುವುದು ರಾಜ್ಯದ ದೊಡ್ಡ ಭಾಗ್ಯವಾಗಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ದೇಶದ ಎಲ್ಲ ಸಂಸದರು, ಮುಖ್ಯಮಂತ್ರಿಗಳು, ಶಾಸಕರು ಸೇರಿದಂತೆ ಎಲ್ಲ ಹುದ್ದೆಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಬ್ಯಾಡಗಿ ವಿಧಾನಸಭೆಯಿಂದ ಡಿ. 27ರಂದು 44 ಗ್ರಾಮ ಪಂಚಾಯಿತಿಗೆ ಒಂದರಂತೆ ಪಟ್ಟಣದಲ್ಲಿ 6 ಬಸ್ ಸೇರಿ 50 ಬಸ್ ಬಿಡಲಾಗುವುದು. ಕಾರ್ಯಕರ್ತರು ಸ್ವಾಭಿಮಾನದಿಂದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಶಿವನಗೌಡ್ರ ಪಾಟೀಲ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ, ದಾನಪ್ಪ ಚೂರಿ, ಚನ್ನಬಸಣ್ಣ ಹುಲ್ಲತ್ತಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ವುುನಾಫ್ಸಾಬ್ ಎರೆಸೀಮೆ, ದುರ್ಗೆಶ ಗೋಣೆಮ್ಮನವರ, ಗಿರೀಶಸ್ವಾಮಿ ಇಂಡಿಮಠ, ರಮೇಶ ಸುತ್ತಕೋಟಿ, ಚಿಕ್ಕಣ್ಣ ಹಾದಿಮನಿ, ಮಾರುತಿ ಅಚ್ಚೀಗೇರಿ, ಖಾದರಸಾಬ್ ದೊಡ್ಡಮನಿ, ರವಿ ಪೂಜಾರ, ಬೀರಪ್ಪ ಬಣಕಾರ, ಪರಮೇಶಪ್ಪ ತೆವರಿ, ಲಕ್ಷ್ಮೀ ಜಿಂಗಾಡೆ, ಪ್ರೇಮಾ ಕಾಗಿನೆಲೆ, ಇತರರಿದ್ದರು.