ನಗರದ ಮಣಿಪಾಲ್ ಆಸ್ಪತ್ರೆ ವೈದ್ಯರಿಂದ ಹಿರಿಯರಿಗೆ ಪ್ರಾಸ್ಪೇಟ್ ಯಶಸ್ವಿ ಚಿಕಿತ್ಸೆ

22
Published on

ಮೈಸೂರು: ಮೂತ್ರ ವಿಸರ್ಜನೆಯ ಕ್ಲಿಷ್ಟಕರ ಸಮಸ್ಯೆ ಎದುರಿಸುತ್ತಿದ್ದ 92 ವರ್ಷದ ಹಿರಿಯ ಜೀವಕ್ಕೆ ನಗರದ ಮಣಿಪಾಲ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗುಣಮುಖವಾಗುವಂತೆ ಮಾಡಿದ್ದಾರೆ.
ಮಂಗಳೂರಿನ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕರೊಬ್ಬರು ಪ್ರಾಸ್ಪೇಟ್ ಗ್ರಂಥಿ ದೊಡ್ಡದಾಗಿ ಬೆಳೆದಿದ್ದ ಕಾರಣ ಮೂತ್ರ ಹಿಡಿದಿಟ್ಟುಕೊಳ್ಳುವ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಯಾವುದೇ ಭಾಗ ಕತ್ತರಿಸದೆ ಅತ್ಯಾಧುನಿಕ ಹೋಲೆಪ್ ಕಾರ್ಯ ವಿಧಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಗುಣಪಡಿಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ದಿನೇಶ್‌ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡು ತಿಂಗಳಿನಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದರು. ಸಮಸ್ಯೆ ಕಾರಣ ಕೃತಕ ನಳಿಕೆ ಮೂಲಕ ಮೂತ್ರ ವಿಸರ್ಜಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇದ್ದರು. ಹಿರಿಯ ಜೀವಾಗಿದ್ದರಿಂದ ಇತರ ಅಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಹಿಂಜರಿಯಲಾಗಿತ್ತು. ಪ್ರತಿವರ್ಷ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಅವರು ಎಲ್ಲಿ ಈ ಅವಕಾಶ ತಪ್ಪುತ್ತದೆಯೋ ಎನ್ನುವ ಆತಂಕದಲ್ಲಿ ಇದ್ದರು ಎಂದರು.
ನಮ್ಮ ಮಣಿಪಾಲ್ ಆಸ್ಪತ್ರೆ ಸಂಪರ್ಕಕ್ಕೆ ಬಂದಾಗ ಅವರಿಗೆ ಹಿರಿಯ ವಯಸ್ಸಿನವರಾದರೂ ಲೇಸರ್ ಪ್ರಾಸ್ಪೆಟೆಕ್ಟಮಿ ವಿಧಾನದ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಪ್ರಾಸ್ಪೇಟ್ ಗ್ರಂಥಿಯಲ್ಲಿದ್ದ ಅನಗತ್ಯ ಅಂಶಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ವಿಧಾನವಾದಲ್ಲಿ ಹೊಟ್ಟೆ ಬಳಿ ಕತ್ತರಿಸುವುದು ಅನಿವಾರ್ಯವಾಗುತ್ತದೆ. ಆದರೆ ಈ ನೂತನ ವಿಧಾನದಲ್ಲಿ ಆ ರೀತಿ ಹೊಟ್ಟೆಯ ಭಾಗ ಕತ್ತರಿಸದೆ ಕೇವಲ ಪ್ರಾಸ್ಪೇಟ್ ಹೋಲ್ಮಿಯಂ ಲೇಸರ್ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆ. ಈಗ ಅವರು ಗುಣಮುಖರಾಗಿದ್ದು, ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಮೈಸೂರಿನಲ್ಲಿ ಪ್ರಥಮ :
ಕ್ಲಿಷ್ಟಕರ ವಿಧಾನವಾದರೂ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಇಂತಹ ಪ್ರಯತ್ನ ಮೈಸೂರಿನಲ್ಲಿ ಪ್ರಥಮ ಎನ್ನಬಹುದು. ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವುದು ನಮ್ಮ ಆಸ್ಪತ್ರೆಯ ಧ್ಯೇಯವಾಗಿದ್ದು, ಕಡು ಬಡವರಿಗೆ ನಮ್ಮ ಫೌಂಡೇಷನ್‌ನಿಂದ ಚಿಕಿತ್ಸೆಗೆ ನೆರವನ್ನೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net