2 ವರ್ಷಗಳಲ್ಲಿ ಶುದ್ಧ ಕ್ರಯ ಪತ್ರ

nkssia sale deed
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹಂಚಿಕೆಯಾದ ನಿವೇಶನಗಳ ಮಾಲೀಕರಿಗೆ 2 ವರ್ಷಗಳಲ್ಲಿ ಶುದ್ಧ ಕ್ರಯಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆಯೋಜಿಸಿದ್ದ ಕೆಎಸ್​ಎಸ್​ಐಡಿಸಿ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಕೈಗಾರಿಕಾ ಮಳಿಗೆ, ನಿವೇಶನಗಳ ಕ್ರಯ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹಂಚಿಕೆಯಾದ ನಿವೇಶನಗಳ ಲೀಸ್ ಕಮ್ ಸೇಲ್ ಅಗ್ರಿಮೆಂಟ್ ಅವಧಿ ಗರಿಷ್ಠ 10 ವರ್ಷಗಳದ್ದಾಗಿದೆ. ಇದನ್ನು 2 ವರ್ಷಗಳಿಗೆ ಇಳಿಸುವ ಸಂಬಂಧ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಬೋರ್ಡ್ ಮೀಟಿಂಗ್​ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳ ಸಮಸ್ಯೆಗಳು ಸಣ್ಣದಲ್ಲ. ಸಣ್ಣ ಕೈಗಾರಿಕೆಗಳ ಸಮಸ್ಯೆಯನ್ನು ನಾನು ಹತ್ತಿರದಿಂದ ಬಲ್ಲೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ. ಸಬ್ಸಿಡಿ ಕೊಡುವುದಷ್ಟೇ ಸಹಾಯವಲ್ಲ. ಇಲಾಖೆಯು ತ್ವರಿತವಾಗಿ ಕೆಲಸ ಮಾಡಬೇಕು. ಹಂತ ಹಂತವಾಗಿ ಎಲ್ಲವನ್ನೂ ಸರಳೀಕರಣಗೊಳಿಸಲಾಗುವುದು ಎಂದರು.

ಸರ್ಕಾರಿ ಇಲಾಖೆಗಳು ಉದ್ಯಮಿಗಳ ಸ್ನೇಹಿಯಾಗಿ ವರ್ತಿಸಬೇಕು. ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸಣ್ಣ, ಗುಡಿ ಕೈಗಾರಿಕೆಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಎಸ್​ಎಸ್​ಐಡಿಸಿ ಅಧ್ಯಕ್ಷ ಟಿ. ರಘುಮೂರ್ತಿ ಮಾತನಾಡಿ, ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 64 ಫಲಾನುಭವಿಗಳಿಗೆ ಮಳಿಗೆ ಮತ್ತು ನಿವೇಶನಗಳ ಕ್ರಯ ಪತ್ರ ವಿತರಣೆ ಮಾಡಲಾಗುತ್ತಿದೆ. ಅದರಲ್ಲಿ 36 ಫಲಾನುಭವಿಗಳು ಗಾಮನಗಟ್ಟಿ ಕೈಗಾರಿಕಾ ಪ್ರದೇಶದವರೇ ಆಗಿದ್ದಾರೆ ಎಂದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿದರು. ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಸ್​ಎಸ್​ಐಡಿಸಿ ಪ್ರಧಾನ ವ್ಯವಸ್ಥಾಪಕ ಸಿ. ನಾಗರಾಜ, ಜೆ.ಸಿ. ಮಠದ, ಅಶೋಕ ಕುನ್ನೂರು, ಅಶೋಕ ಕಲಬುರ್ಗಿ, ಅನಿಲಕುಮಾರ ಜೈನ್, ಶಂಕರ ಹಿರೇಮಠ, ಭರತ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net