

ಚಿಕ್ಕಮಗಳೂರು: ಜಿಲಾಧಿಕಾರಿ ಸೇರಿ ಜಿಲ್ಲಾಡಳಿತದ ವಿವಿಧ ಇಲಾಖೆಯ ಬಹುತೇಕ ಎಲ್ಲ ಅಧಿಕಾರಿಗಳು ಗಡಿ ಗ್ರಾಮ ಕೆ.ಬಿ.ಹಾಳ್‍ಗೆ ಆಗಮಿಸಿದ್ದರು. ಗ್ರಾಮಸ್ಥರೂ ಕೂಡ ಶಾಪದ ರೀತಿಯಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ವಿಮೋಚನೆ ಸಿಗುವ ವಿಶ್ವಾಸದಲ್ಲಿ ಗ್ರಾಮಸ್ಥರು ಕಾಯುತ್ತಿದ್ದರು.
ಜಿಲ್ಲಾಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮಕ್ಕೆ ಮುನ್ನುಡಿಯಾದ ತಾಲೂಕಿನ ಗಡಿ ಗ್ರಾಮ ಕೆ.ಬಿ.ಹಾಳ್‍ನಲ್ಲಿ ಶನಿವಾರ ಹಬ್ಬದ ಸಂಭ್ರಮ. ಕಾರ್ಯಕ್ರಮ 11.30ಕ್ಕೆ ನಿಗದಿಯಾಗಿದ್ದರೂ ಅವಧಿಗೂ ಮುನ್ನವೇ ಗ್ರಾಮಸ್ಥರು ಸಭೆಗೆ ಆಗಮಿಸಿದ್ದರು. ಅದಾಗಲೇ ಸಮಸ್ಯೆಗಳ ಸಹಿತ ಬಂದವರಿಗೆ ಪ್ರತ್ಯೇಕ ಕೌಂಟರ್‍ಗಳಲ್ಲಿ ಅರ್ಜಿ ಸ್ವೀಕರಿಸಿ ಮುಖ್ಯ ವೇದಿಕೆಯಲ್ಲಿ ಕುಳಿತ ಹಿರಿಯ ಅಧಿಕಾರಿಗಳಿಗೆ ರವಾನಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಹಾಗೂ ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ 10 ದಿನಗಳಿಂದ ಗ್ರಾಮದಲ್ಲಿ ಜನರಲ್ಲಿ ಕಾರ್ಯಕ್ರಮದ ಅರಿವು ಮೂಡಿಸುವ ಜತೆಗೆ ಸಾಕಷ್ಟು ಅರ್ಜಿಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದರಿಂದ 162 ಅರ್ಜಿಗಳು ಸ್ವೀಕೃತಿಯಾಗಿದ್ದವು. ಶನಿವಾರ ಈ ಸಂಖ್ಯೆ 262ಕ್ಕೇರಿದ್ದು, 98 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥವಾದವು. ಬೆಳಗ್ಗೆ 11.30ರ ಸುಮಾರಿಗೆ ಆಗಮಿಸಿದ ಪ್ರಭಾರ ಜಿಲ್ಲಾಧಿಕಾರಿ ಡಾ.ಪೂವಿತಾ ಅವರನ್ನು ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಜಿಲ್ಲಾಧಿಕಾರಿ ಗ್ರಾಮದಲ್ಲಿ ಪ್ರದಕ್ಷಿಣೆ ನಡೆಸಿದರು. ನಂತರ ಮಾತನಾಡಿದ ಅವರು, ಈ ಭಾಗದಲ್ಲಿ ಜಾನುವಾರು ಸಾಕಣೆ ಪ್ರಮುಖವಾಗಿರುವುದರಿಂದ ಈ ಭಾಗದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮದಲ್ಲಿ ಸ್ವಚ್ಛತೆ ಸಮಸ್ಯೆ ಇದ್ದು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮದ ಶಾಲೆ ಆವರಣ ಗೋಡೆ ನಿರ್ಮಾಣಕ್ಕೆ ನರೇಗಾ ಕ್ರಿಯಾಯೋಜನೆಯಲ್ಲಿ ಅನುಮೋದನೆ ದೊರೆತಿದೆ. ಜಾಗದ ವಿವಾದದಿಂದ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಭೂ ದಾಖಲೆಗಳ ಕಚೇರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು, ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಸದ್ಯದಲ್ಲೇ ಶಾಲಾ ಆವರಣದಲ್ಲಿ ಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ವಿವಿಧ ಮಾಸಾಶನ ಮಂಜೂರಾತಿ ಆದೇಶ ಪತ್ರ, ಅಂಗವಿಕಲರಿಗೆ ಪರಿಕರಗಳನ್ನು ವಿತರಿಸಲಾಯಿತು. 550 ಮಂದಿ ರೈತರಿಗೆ ಪಟ್ಟಾಪುಸ್ತಕ ಸಿದ್ಧಪಡಿಸಲಾಗಿದ್ದು, ಸಾಂಕೇತಿಕವಾಗಿ 12 ಮಂದಿಗೆ ವಿತರಿಸಲಾಯಿತು.
ಸಖರಾಯಪಟ್ಟಣ ಪ್ರತ್ಯೇಕ ತಾಲೂಕಾಗಲಿ:
ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಕೆ.ಬಿ.ಹಾಳ್ ಸೇರಿದಂತೆ ಲಕ್ಯಾ ಹೋಬಳಿ ಸದಾ ಬರದಿಂದ ತತ್ತರಿಸುತ್ತಿದ್ದು, ಸಖರಾಯಪಟ್ಟಣ ಪ್ರತ್ಯೇಕ ತಾಲೂಕು ರಚನೆಯಾಗಬೇಕು ಎಂದು ಹೇಳಿದರು. ಚಿಕ್ಕಮಗಳೂರು ತಾಲೂಕಿನಲ್ಲಿ ವಾಡಿಕೆಗಿಂತ ಶೇ.36ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಲಕ್ಯಾದಲ್ಲಿ ವಾಡಿಕೆಗಿಂತ ಶೇ.80 ರಷ್ಟು ಕಡಿಮೆ ಮಳೆಯಾಗುತ್ತಿದೆ. ಲಕ್ಯಾ ದೊಡ್ಡ ಹೋಬಳಿ ಕೇಂದ್ರವಾಗಿದ್ದರೂ ಪಶು ವೈದ್ಯಕೀಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡಕಚೇರಿ ಇಲ್ಲದೆ ಜನರು ಎಲ್ಲಕ್ಕೂ ತಾಲೂಕು ಕೇಂದ್ರವನ್ನು ಆಶ್ರಯಿಸುವಂತಾಗಿದೆ ಎಂದು ಹೇಳಿದರು.
ಪಹಣಿ ದೋಷ ಸರಿಪಡಿಸುವ ಉದ್ದೇಶ:
ಪೌತಿ ಖಾತೆದಾರರ ಆಧಾರ್ ಕಾರ್ಡ್, ಬ್ಯಾಂಕ್ ವಿವರ ತಂತ್ರಾಂಶದಲ್ಲಿ ದಾಖಲಾಗದಿರುವುದರಿಂದ ಜಿಲ್ಲೆಯಲ್ಲಿ 12,500 ರೈತರು ಬೆಳೆ ಹಾನಿ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಶೀಘ್ರದಲ್ಲಿ ಪೌತಿ ಖಾತೆ ಹಾಗೂ ಪಹಣಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ತಿಳಿಸಿದರು.
ಪಹಣಿಯಲ್ಲಿ ರೈತರಿಗೇ ಗೊತ್ತಿಲ್ಲದ ಹಲವು ಸಮಸ್ಯೆಗಳನ್ನು ಆಂದೋಲನದಲ್ಲಿ ಪತ್ತೆ ಹಚ್ಚಿ ಸರಿಪಡಿಸಲಾಗುವುದು ಎಂದರು. ಯಾರದ್ದೋ ಜಮೀನನ್ನು ಇನ್ನಾರೋ ಉಳುಮೆ ಮಾಡುತ್ತಿರುವುದು. ಆರ್‍ಟಿಸಿ ಬೇರೆ ಹೆಸರಿನಲ್ಲಿ ಇರುವುದು - ಇಂಥ ವಿಶೇಷ ಪ್ರಕರಣಗಳು ಈ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು ಅವುಗಳನ್ನು ಸರಿಪಡಿಸಲಾಗುವುದು. ಆರ್‍ಟಿಸಿ ಮತ್ತು ಮ್ಯುಟೇಷನ್ ಹಾಗೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಅಟ್ಲಾಸ್ ಟಿಪ್ಪಣಿ, ಪಕ್ಕಾಪ್ರತಿ, ಗ್ರಾಮನಕಾಶೆ, ಆಕಾರ್ ಬಂದಿಗಳು ಪ್ರತ್ಯೇಕವಾಗಿ ರಚನೆಯಾಗಿದ್ದರೆ ಯಾವುದೇ ಸಿವಿಲ್ ವಿವಾದಗಳಿಗೆ ಅವಕಾಶವಿರುವುದಿಲ್ಲ. ಅಟಲ್ ಜನಸ್ನೇಹಿ ಕೇಂದ್ರಗಳನ್ನು ಎಲ್ಲೆಡೆ ತೆರೆಯಲಾಗಿದೆ. ರೈತರು ಇದರ ಅನುಕೂಲ ಪಡೆಯಬೇಕು. ಕಂದಾಯ ಇಲಾಖೆಗೆ ಸೇರಿದ ಶೇ.70ರಷ್ಟು ಸವಲತ್ತು ಸಕಾಲ ಕಾಯ್ದೆಯಡಿ ಲಭ್ಯವಿದೆ ಎಂದರು.
ಆರ್‍ಟಿಸಿ ಸಮಸ್ಯೆ ಪರಿಹರಿಸಲು ಕ್ರಮ:
ಕೇಂದ್ರ ಸರ್ಕಾರದ ಲ್ಯಾಂಡ್ ಟೈಟ್ಲಿಂಗ್ ಕಾಯ್ದೆ ಪ್ರಕಾರ ಚಿಕ್ಕಮಗಳೂರು ಮತ್ತು ಎನ್.ಆರ್.ಪುರ ತಾಲೂಕುಗಳ ಆರ್‍ಟಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಆರ್‍ಟಿಸಿಯ 9 ನೇ ಕಾಲಂನಲ್ಲಿ ಖಾತೆದಾರರ ಹೆಸರು ಬಂದರೆ ಕಾಲಂ 12ರಲ್ಲಿ ಬರುತ್ತಿಲ್ಲ. ಅದನ್ನು ಸರಿಪಡಿಸಲಾಗುವುದು. ದರ್ಖಾಸ್ತು ಮತ್ತಿತರ ಯೋಜನೆಯಡಿ ಸರ್ಕಾರದಿಂದ ಮಂಜೂರಾದ ಭೂಮಿಗಳಿಗೆ ಬ್ಯಾಂಕ್‍ಗಳು ಸಾಲ ನಿರಾಕರಿಸುತ್ತಿರುವ ನಿದರ್ಶನಗಳಿವೆ. ಬ್ಯಾಂಕ್‍ಗಳು ಬಡವರ ಜಮೀನು ಅಭಿವೃದ್ಧಿ ಸಕಾಲದಲ್ಲಿ ಸಾಲ ಮಂಜೂರು ಮಾಡಬೇಕು ಎಂದು ಎ.ಸಿ. ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ಮಾತನಾಡಿ, ಮುಂದಿನ ಐದು ವರ್ಷದಲ್ಲಿ ಅರ್ಜಿ ಹಿಡಿದು ತೆರಳುವ ವ್ಯವಸ್ಥೆ ಬದಲಾಗಿ ಎಲ್ಲವೂ ಆನ್‍ಲೈನ್‍ನಲ್ಲೇ ಮಾಡಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರಿಗೆ ತಂತ್ರಾಂಶದ ಮೂಲಕ ಗುರುತಿನ ಪತ್ರ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ತಾಪಂ ಸದಸ್ಯೆ ಶುಭಾ ಸತ್ಯಮೂರ್ತಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುರುಪ್ರಸಾದ್, ಸತ್ಯಮೂರ್ತಿ ಇದ್ದರು.