ಯುಜಿಡಿ ಬಳಕೆ ಶುಲ್ಕ ರದ್ದುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ

Published on

ಹುಬ್ಬಳ್ಳಿ : ಪ್ರಸಕ್ತ ಸಾಲಿಗೆ ಆಕರಿಸಲಾಗಿದ್ದ ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಹಾಗೂ ಒಳಚರಂಡಿ ಬಳಕೆ ಶುಲ್ಕವನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಗಳವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಅಂಗೀಕರಿಸಲಾಯಿತು.

ಬಿಜೆಪಿ ಸದಸ್ಯ ವೀರಣ್ಣ ಸವಡಿ ಅವರ ಗಮನ ಸೆಳೆಯುವ ಸೂಚನೆ ಮೇರೆಗೆ ನಡೆದ ಚರ್ಚೆಯಲ್ಲಿ, ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಹಾಗೂ ಒಳಚರಂಡಿ ಬಳಕೆ ಶುಲ್ಕವನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಹಾಗೂ ಒಳಚರಂಡಿ ಬಳಕೆ ಶುಲ್ಕವನ್ನು 2025-26ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಹೊಸದಾಗಿ ಸೇರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಮತ್ತು ಕರ್ನಾಟಕ ವಾಣಿಜೊ್ಯೕದ್ಯಮ ಸಂಸ್ಥೆ ವಿರೋಧ ವ್ಯಕ್ತಪಡಿಸಿದ ನಂತರ ಮಹಾನಗರ ಪಾಲಿಕೆಯು ಇದನ್ನು ಹಿಂಪಡೆದಿತ್ತು.

ಹು-ಧಾ ದಲ್ಲಿ ಶೇ.60 ರಷ್ಟು ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಹೀಗಿರುವಾಗ ಒಳಚರಂಡಿ ಬಳಕೆ ಶುಲ್ಕ ಆಕರಿಸುವುದು ಸಮಂಜಸವಲ್ಲ. ಸಂಪೂರ್ಣವಾಗಿ ಅನುಷ್ಠಾನವಾದ ಬಳಿಕ ಶುಲ್ಕವನ್ನು ಆಕರಣೆ ಮಾಡಲಾಗುವುದು. ಅಲ್ಲಿಯವರೆಗೆ ಒಳಚರಂಡಿ ಬಳಕೆ ಶುಲ್ಕ ಪಡೆಯದಂತೆ ಸರ್ಕಾರಕ್ಕೆ ಠರಾವು ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ ಹಾಗೂ ಒಳಚರಂಡಿ ಬಳಕೆ ಶುಲ್ಕ ವಿಧಿಸುವ ಪೂರ್ವ ಪ್ರತಿಪಕ್ಷದವರ ಗಮನಕ್ಕೆ ತಂದಿಲ್ಲ. ಏಕಾಏಕಿ ನಿರ್ಧಾರ ಕೈಗೊಂಡು ಜನರ ವಿರೋಧದ ಬಳಿಕ ಹಿಂಪಡೆದಿದ್ದೀರಿ. ಈಗಾಗಲೇ ಹೆಚ್ಚುವರಿ ಪಾವತಿಸಿರುವವರಿಗೆ ತಕ್ಷಣ ವಾಪಸ್ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಇಮ್ರಾನ್ ಎಲಿಗಾರ ಆಗ್ರಹಿಸಿದರು.

ಉಣಕಲ್ಲನ ಸಾಯಿನಗರ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರದಿಂದ 7 ವರ್ಷಗಳ ಹಿಂದೆಯೇ 20 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ವಶಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಸಂಪೂರ್ಣವಾಗಿ ಪರಿಹಾರ ನೀಡಲ್ಲ ಎಂದು ಬಿಜೆಪಿ ಸದಸ್ಯರಾದ ಉಮೇಶ ಕೌಲಗೇರಿ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ ದೂರಿದರು.

ಗುತ್ತಿಗೆದಾರರು ಕಾಮಗಾರಿಯನ್ನು ಬಿಟ್ಟು ಹೋದರೆ ಪಾಲಿಕೆಯಿಂದ ಬಾಕಿ ಉಳಿದ ಕಾಮಗಾರಿ ಕೈಗೊಳ್ಳಲಾಗುವುದೇ ? ಎಂದು ಪ್ರಶ್ನಿಸಿದರು.

ಸ್ಥಳಕ್ಕೆ ಭೇಟಿ ನೀಡಿ, ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದಾಗಿ ಆಯುಕ್ತ ಡಾ. ರುದ್ರೇಶ ಘಾಳಿ ಭರವಸೆ ನೀಡಿದರು.

ನವನಗರ ಸುತ್ತಲಿನ ಪ್ರದೇಶದಲ್ಲಿ ಈ ಮೊದಲು 4-5 ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದ್ದ ನಳದ ನೀರು, ಇತ್ತೀಚಿನ ದಿನಗಳಿಗೆ 8-9 ದಿನಗಳಿಗೊಮ್ಮೆ ಬರುತ್ತಿದೆ. ಅಧಿಕಾರಿಗಳನ್ನು ಕೇಳಿದರೆ ವಿದ್ಯುತ್ ಸಮಸ್ಯೆಯ ಸಬೂಬು ನೀಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಚಂದ್ರಶೇಖರ ಮನಗುಂಡಿ ದೂರಿದರು.

ಮಾರ್ಚ್​ನಲ್ಲಿ ಹೆಚ್ಚು ಬಾರಿ ವಿದ್ಯುತ್ ವ್ಯತ್ಯಯವಾಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಆಯುಕ್ತರು ಸಮಜಾಯಿಸಿ ನೀಡಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಬೇಸಿಗೆ ಮುಂಚೆಯೇ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹರಿಹಾಯ್ದರು.

ತಮ್ಮ ವಾರ್ಡ್​ನಲ್ಲಿ ಈಗಾಗಲೇ ಇಬ್ಬರು ಟಿಪ್ಪರ್ ಚಾಲಕರು ಸಾವಿಗೀಡಾಗಿದ್ದು, ಮೂವರು ನಿವೃತ್ತರಾಗಿದ್ದಾರೆ. ಇನ್ನಿರುವ ಚಾಲಕರನ್ನು ವರ್ಗಾಯಿಸಲಾಗಿದೆ. ಇದರಿಂದ ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆಯಲ್ಲಿ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್​ನ ಕವಿತಾ ಕಬ್ಬೇರ ಅಹವಾಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net