‘ಸ್ಕೈ ಡೆಕ್’ಗೆ ಜಾಗ ಕೋರಿ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ

Skydeck
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸ್ಕೈ ಡೆಕ್ ಯೋಜನೆಗೆ ಅಗತ್ಯ ಜಾಗ ನೀಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಚಟುವಟಿಕೆಗೆ ಚಾಲನೆ ದೊರೆತಿದೆ.

ಸ್ಕೈ ಡೆಕ್ ಯೋಜನೆ ಅನುಷ್ಠಾನಕ್ಕೆ ತರುವ ಸಂಬಂಧ ಜಾಗವನ್ನು ಅಂತಿಮಗೊಳಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಳೆದ ಮಂಗಳವಾರ (ಜೂ.3) ಕೆಂಪೇಗೌಡ ಲೇಔಟ್‌ಗೆ ಭೇಟಿ ನೀಡಿ ಜಾಗವನ್ನು ಪರಿಶೀಲನೆ ನಡೆಸಿದ್ದರು. ಈ ಜಾಗವು ಯೋಜನೆ ಜಾರಿಗೆ ಅನುಕೂಲ ವಾತಾವರಣ ಇರುವುದನ್ನು ಮನಗಂಡಿರುವ ಡಿಸಿಎಂ, ಮುಂದಿನ ಪ್ರಕ್ರಿಯೆ ಕೈಗೊಳ್ಳಲು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರನ್ವಯ ಜಮೀನನ್ನು ಅಧಿಕೃತವಾಗಿ ಯೋಜನೆಗೆ ಮಂಜೂರು ಮಾಡುವ ಸಂಬಂಧ ಕಡತ ಸಿದ್ಧಪಡಿಸಲು ಬಿಡಿಎ ಮುಂದಾಗಿದೆ.

ಕೆಂಪೇಗೌಡ ಬಡಾವಣೆ ವ್ಯಾಪ್ತಿಗೆ ಸೇರಿರುವ ಬೈರೋಹಳ್ಳಿಯಲ್ಲಿ ಬಿಡಿಎಯಿಂದ ಬಳಕೆಯಾಗದ ಜಾಗವಿದೆ. ಈ ಜಮೀನು ಸುಮಾರು 70 ಎಕರೆ ಇದ್ದು, ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದ ಕಾರಣ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡಿರಲಿಲ್ಲ. ಇದೀಗ ಈ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಾಧಿಕಾರ ಚರ್ಚೆ ನಡೆಸಿದೆ. ಈ ಹಂತದಲ್ಲೇ ಡಿಸಿಎಂ ಅವರು ಈ ಜಮೀನಿನಲ್ಲಿ 25 ಎಕರೆ ಜಾಗವನ್ನು ಸ್ಕೈ ಡೆಕ್ ಯೋಜನೆಗೆ ಬಳಸಿಕೊಳ್ಳಲು ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಪ್ರಾಧಿಕಾರದ ಅಧಿಕಾರಿಗಳು ಜಾಗದ ದಾಖಲೆಪತ್ರಗಳನ್ನು ಪರಾಮರ್ಶೆಗೆ ಒಳಪಡಿಸುವಲ್ಲಿ ಸಕ್ರಿಯರಾಗಿದ್ದಾರೆ.

ಬಿಡಿಎ ಜಾಗ, ಪಾಲಿಕೆ ಹಣ:

ಸ್ಕೈ ಡೆಕ್ ಯೋಜನೆ ಜಾರಿಗೆ 400 ಕೋಟಿ ರೂ. ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ಈ ಪ್ರಾಜೆಕ್ಟ್‌ಅನ್ನು ಇತ್ತೀಚಿಗೆ ಮಂಡನೆಯಾದ ಬಿಬಿಎಂಪಿ ಬಜೆಟ್‌ನಲ್ಲಿ ಅಡಕಗೊಳಿಸಲಾಗಿದೆ. ಜತೆಗೆ ಸರ್ಕಾರದ ನೆರವಿನಲ್ಲಿ ಬಿಬಿಎಂಪಿ ಅನುದಾನದೊಂದಿಗೆ ಹಣ ಬಳಸಲು ಚಿಂತನೆ ಇದೆ. ಯೋಜನೆಗೆ ಅಗತ್ಯ ಜಮೀನು ಬಿಡಿಎಯಿಂದ ಮಂಜೂರು ಆಗಲಿದೆ. ಇದಕ್ಕಾಗಿ ಈ ತಿಂಗಳ ಅಂತ್ಯದೊಳಗೆ ನಡೆಯಲಿರುವ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಸ್ಕೈ ಡೆಕ್ ಯೋಜನೆಗೆ ಜಾಗ ಮೀಸಲಿರಿಸಿ ಹಾಗೂ ಜಮೀನು ಮಂಜೂರು ಮಾಡುವ ಸಂಬಂಧ ನಿರ್ಣಯ ಕೈಗೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net