

ಲಿಂಗದಹಳ್ಳಿ: ರಾಜ್ಯದ ಕೆಮ್ಮಣ್ಣುಗುಂಡಿ, ಲಕ್ಕವಳ್ಳಿ, ಬಂಡೀಪುರ, ಕಬಿನಿ, ಭದ್ರಾ, ಕಾಳಿ, ಆನೆಗುಂದಿ ಸೇರಿದಂತೆ 27 ಕಡೆಗಳಲ್ಲಿ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಆನ್‌ಲೈನ್ ಮೂಲಕ ನೋಂದಣೆ ಮಾಡಿಕೊಳ್ಳುವ ಪ್ರವಾಸಿಗರಿಗೆ ಊಟ, ವಸತಿ ಸೇರಿದಂತೆ ಆಯಾ ಭಾಗದ ಸ್ಥಳಗಳ ಪರಿಚಯ ಮಾಡಿಕೊಡಲಾಗುತ್ತಿದೆ ಎಂದು ರಾಜ್ಯ ಜಂಗಲ್ ರೆಸಾರ್ಟ್‌ಗಳ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಶಂಕಿನಮಠ ಹೇಳಿದರು.
ರಾಜ್ಯ ವಿಧಾನ ಪರಿಷತ್‌ನ ಅರ್ಜಿ ಸಮಿತಿ ಅಧ್ಯಕ್ಷ ಸುನೀಲ್ ಭಯ್ಯಪುರ ನೇತೃತ್ವದಲ್ಲಿ ಎಂಎಲ್‌ಸಿಗಳಾದ ಎಂ.ಎಲ್. ಅನಿಲ್ ಕುಮಾರ್, ಎಂ.ಪಿ. ಕುಶಾಲಪ್ಪ, ಎಸ್.ವಿ. ಸಂಕನೂರ್ ಅವರ ನಿಯೋಗ ಕೆಮ್ಮಣ್ಣುಗುಂಡಿಯ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮಕ್ಕೆ ಭೇಟಿ ನೀಡಿ ಇಲ್ಲಿನ ಜಂಗಲ್ ರೆಸಾರ್ಟ್‌ನ ವಸತಿಗೃಹ, ಊಟದ ಸ್ಥಳಗಳು ಮೂಲ ಸೌಕರ್ಯ, ಕುಂದು ಕೊರತೆಗಳ ಬಗ್ಗೆ ಅಧ್ಯಯನ ನಡೆಸಿದ ಜಂಗಲ್ ರೆಸಾರ್ಟ್ ಸಿಬ್ಬಂದಿಗೆ ಕೆಲವು ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದರು.
ಬಡವರ ಊಟಿ ಎಂದೇ ಪ್ರಖ್ಯಾತವಾಗಿರುವ ಕೆಮ್ಮಣ್ಣುಗುಂಡಿಯ ಶ್ರೀಕೃಷ್ಣರಾಜೇಂದ್ರ ಗಿರಿಧಾಮದ ರಸ್ತೆ ಹಾಳಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಾರಸ್ಸು ಮಾಡುವುದಾಗಿ ತಿಳಿಸಿದರು. ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಬಡವರ ಊಟಿ ಎಂದು ಪ್ರಸಿದ್ಧವಾಗಿದ್ದರೂ ಸ್ವಂತ ವಾಹನ ಇಲ್ಲವೇ ದುಬಾರಿ ಬಾಡಿಗೆ ವಾಹನ ಮಾಡಿಕೊಂಡು ಬರುವ ಶ್ರೀಮಂತರಿಗೆ ಮಾತ್ರ ದೊರೆಯುವಂತಾಗಿದೆ. ಮಧ್ಯಮ ವರ್ಗ ಮತ್ತು ಬಡವರು ಇಲ್ಲಿಗೆ ಬರಲು ಸಾಧ್ಯವಿಲ್ಲದಂತಾಗಿದೆ. ಇಲ್ಲಿಗೆ ಬರುವ ರಸ್ತೆ ಅಭಿವೃದ್ಧಿ ಪಡಿಸಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದರೆ ಎಲ್ಲ ವರ್ಗದವರಿಗೂ ಬರಲು ಅನುಕೂಲವಾಗಲಿದೆ.