ಹೆಸರುಟ್ಟ ಕೆರೆ ಸಮಗ್ರ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ

BWSSB
Published on

ಬೆಂಗಳೂರು: ಹೆಸರುಟ್ಟ ಕೆರೆಯ ಅಭಿವೃದ್ಧಿಯಿಂದ ಸುತ್ತಮುತ್ತಲ ಗ್ರಾಮಗಳಿಗೆ ಹಾಗೂ ನಗರದ ಭವಿಷ್ಯದ ನೀರಿನ ಬಳಕೆಗೆ ಅನುಕೂಲವಾಗಲಿದೆ. ಇದನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಜಲಮಂಡಳಿ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ರಾಜ್ಯ ರೈತ ಸಂದ ಅಧ್ಯ ಅರಳಾಪುರ ಮಂಜೇಗೌಡ ಮಾತನಾಡಿ, ಹೆಸರುಟ್ಟ ಕೆರೆಯಲ್ಲಿರುವ ನೀರನ್ನೇ ಅಕ್ಕಪಕ್ಕದ ಗ್ರಾಮದ ನಿವಾಸಿಗಳು, ಪ್ರಾಣಿ&ಪಗಳು ಅವಲಂಬಿಸಿವೆ. ಈ ಹಿನ್ನಲೆ ನೀರನ್ನು ಸರಬರಾಜು ಮಾಡುವುದು ಬೇಡ. ಈ ಕೆರೆಗೆ ನೀರು ಹರಿದು ಬರುವ ಪ್ರದೇಶಗಳಲ್ಲಿನ ಮಾಲಿನ್ಯವನ್ನು ತೆಗೆದುಹಾಕಿ, ಕೆರೆಯಲ್ಲಿ ತುಂಬಿರುವ ಹೂಳು ತೆಗೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಜಲಮಂಡಳಿ ಅಧ್ಯಕ್ಷರು, ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೆಸರಟ್ಟ ಕೆರೆ ನೀರನ್ನು ಸೋಲದೇವನಹಳ್ಳಿಯ ಪಂಪಿಂಗ್​ ಸ್ಟೇಷನ್​ನಿಂದ ಸರಬರಾಜು ಮಾಡಲಾಗುತ್ತಿತ್ತು. ದಾಸರಹಳ್ಳಿ ಪ್ರದೇಶದಲ್ಲಿರುವ ನೀರಿನ ಅಭಾವ ನೀಗಿಸಲು ಹೆಸರುಟ್ಟ ಕೆರೆಯಿಂದ ಸಣ್ಣ ಪ್ರಮಾಣದಲ್ಲಿ ನೀರು ಸರಬರಾಜು ಮಾಡಲು ಜಲಮಂಡಳಿ ಉದ್ದೇಶಿಸಿತ್ತು. ಇದಕ್ಕಾಗಿ ಅಗತ್ಯ ತಯಾರಿಯೊಂದಿಗೆ ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಲಭ್ಯವಾಗುವ ನೀರನ್ನು ಸರಬರಾಜು ಮಾಡಲು ಸಜ್ಜುಗೊಳಿಸುವುದು ನಮ್ಮ ಗುರಿಯಾಗಿತ್ತು. ಇದೀಗ ರೈತ ಸಂದ ಪದಾಧಿಕಾರಿಗಳು ನೀರು ಸರಬರಾಜು ಮಾಡದಂತೆ ಮನವಿ ಮಾಡಿದ್ದು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂದ ರಾಜ್ಯ ಕಾರ್ಯದರ್ಶಿ ನಂಜುಂಡಪ್ಪ ಕಡತನಮಲೆ, ಸಂಘಟನಾ ಕಾರ್ಯದರ್ಶಿ ಆರ್.ಲೋಕೇಶ್​ ಶರ್ಮಾ, ಜಲಮಂಡಳಿಯ ಪ್ರಧಾನ ಮುಖ್ಯ ಇಂಜಿನಿಯರ್​ ಸುರೇಶ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net