

ಆಳಂದ: ತಾಲೂಕಿನಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗೆ ಎ.ವಿ.ಪಾಟೀಲ್ ಹೆಸರಿಡಲು ಹಾಗೂ ರೈತ ಭವನ ನಿರ್ಮಿಸಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಆಳಂದ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಮಾಲಿಪಾಟೀಲ್ ಧಂಗಾಪುರ ಹೇಳಿದರು.
ದಾರಪುಷ್ಪ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಯ 42ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಖಾನೆಗೆ ಎ.ವಿ.ಪಾಟೀಲ್ ಹೆಸರಿಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಸಿದ್ದರಾಮ ಸಾಲಿಮನಿ, ನಿರ್ದೇಶಕರಾದ ಶಿವರಾಜ ಪಾಟೀಲ್, ಹರ್ಷವರ್ಧನ ಗೂಗಳೆ, ನೀಲಕಂಠರಾವ ಪಾಟೀಲ್, ಧರ್ಮರಾಜ ಸಾಹು, ಚನ್ನಬಸಪ್ಪ ಪಾಟೀಲ್, ಶಿವಪುತ್ರಪ್ಪ ಕೊಟ್ಟರಕಿ, ಶಾಂತೇಶ್ವರ ಸಣ್ಣಮನಿ, ರೇಣುಕಾ ಹಾವನಳ್ಳಿ, ಕಮಲಾಬಾಯಿ ಸಕ್ಕರಗಾ, ಶಿವರಾಜ ಮಹಾಗಾಂವ್ ಇತರರಿದ್ದರು.
ಎಸ್. ಮಂಜುಳಾ ಪ್ರಸ್ತಾವಿಕ ಮಾತನಾಡಿದರು. ಸುನೀಲ ಮಠ ವಾರ್ಷಿಕ ವರದಿ ವಾಚಿಸಿದರು. ನಾಗರಾಜ ಪಾಟೀಲ್ ಸ್ವಾಗತಿಸಿದರು. ಸಿದ್ದರಾಮ ನಡಗೇರಿ ನಿರೂಪಣೆ ಮಾಡಿದರು.