

ಹಾನಗಲ್ಲ: ಪಟ್ಟಣದಲ್ಲಿ ಹಾದು ಹೋಗಿರುವ ತಡಸ- ಶಿವಮೊಗ್ಗ ಮುಖ್ಯರಸ್ತೆ ವಿಸ್ತರಣೆಗಾಗಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ, ಪುರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
ತಡಸ- ಶಿವಮೊಗ್ಗ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯವನ್ನು ವರ್ಲ್ಡ್ ಬ್ಯಾಂಕ್‌ನ ನೆರವಿನಿಂದ ಕೆಶಿಪ್ ಕೈಗೆತ್ತಿಕೊಂಡಿತ್ತು. ಆದರೆ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2021ರ ಜೂನ್‌ನಲ್ಲಿಯೇ ರಸ್ತೆಯನ್ನು ಕೆಶಿಪ್ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ.
ಕೆಶಿಪ್ ಪಾತ್ರ ಮುಗಿದಿದ್ದು, ಇನ್ನೇನಿದ್ದರೂ ರಾಜ್ಯ ಸರ್ಕಾರದ ಅನುದಾನದಲ್ಲಿಯೇ ರಸ್ತೆ ಅಭಿವೃದ್ಧಿಪಡಿಸಬೇಕಿದೆ ಎಂದು ವಿವರಿಸಿದರು.
ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಳೆದ ಉಪ ಚುನಾವಣೆಯ ನಂತರ ಸ್ವತಃ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಕಷ್ಟು ಒತ್ತಡ ಹಾಕಿದ ಬಳಿಕ ಒಪ್ಪಿಗೆ ನೀಡಿದ್ದರು.
ಆದರೆ, ಅನುಮೋದನೆ ನೀಡುವ ಸಂದರ್ಭದಲ್ಲಿ 5 ಕೋಟಿ ರೂ. ಮಾತ್ರ ಮಂಜೂರು ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದು, ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಸ್ತೆಯನ್ನು ಇದ್ದ ಪರಿಸ್ಥಿತಿಯಲ್ಲಿಯೇ ಅಭಿವೃದ್ಧಿಪಡಿಸುವುದಾದರೆ ರಾಜಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಫುಟ್‌ಪಾತ್ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು ಎನ್ನುವ ಒತ್ತಾಯ ಸಭೆಯಲ್ಲಿ ಕೇಳಿ ಬಂದಿತು.
ತಹಸೀಲ್ದಾರ್ ಶಶಿಧರ ಮಾಡ್ಯಾಳ, ಲೋಕೋಪಯೋಗಿ ಇಲಾಖೆಯ ಎಇಇ ಕೆ. ನಾಗರಾಜ, ಸಹಾಯಕ ಇಂಜಿನಿಯರ್ ಪಾಂಡುರಂಗಪ್ಪ, ಸಿಪಿಐ ಎಸ್.ಆರ್. ಶ್ರೀಧರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಇಂಜಿನಿಯರ್ ಎನ್.ಕೆ. ಮಿರ್ಜಿ, ಸೋಮಶೇಖರ ಕೋತಂಬರಿ, ಬಸವರಾಜ ಶೀಲವಂತ, ಹನುಮಂತ ಹುಡೇದ, ರವಿಚಂದ್ರ ಪುರೋಹಿತ ಇದ್ದರು.
ಸಾರ್ವಜನಿಕರಾದ ಪ್ರಶಾಂತ ಮುಚ್ಚಂಡಿ, ಸತೀಶ ಕುಲಕರ್ಣಿ, ರಾಮಚಂದ್ರ ಚಿಕ್ಕಣ್ಣನವರ, ಮಾರ್ತಾಂಡ ಪಾರಗಾಂವಕರ, ಹನುಮಂತ ಬಾಳೂರ ಹಲವರು ಕೆಲ ಸಲಹೆ ನೀಡಿದರು.