ರಾಜ್-ಅಪ್ಪು ಮ್ಯೂಸಿಯಂ ಸ್ಥಾಪನೆಗೆ ಪ್ರಸ್ತಾವನೆ

28 HANUR 3
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ದಿವಂಗತ ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಮ್ಯೂಸಿಯಂ ಸ್ಥಾಪನೆ ಸಂಬಂಧ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜನಪರ ಸಾಹಿತ್ಯ ಪರಿಷತ್ ಬೆಂಗಳೂರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ಧ ಜನಪದ ಉತ್ಸವ ಹಾಗೂ ಜನಪರ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜನಪದ ಕಲೆಗಳ ತವರೂರಾಗಿದ್ದು, ಸಾಂಸ್ಕೃತಿಕ ಸೊಗಡಿನ ಜಿಲ್ಲೆಯಾಗಿದೆ. ಪವಾಡ ಪುರುಷರಾದ ಶ್ರೀ ಮಲೆಮಹದೇಶ್ವರರು, ಬಿಳಿಗಿರಿರಂಗಸ್ವಾಮಿ, ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ ನೆಲೆಸಿರುವ ಬೀಡಾಗಿದೆ. ಹಾಗಾಗಿ ಜನಪದ ಕಲೆ ಶ್ರೀಮಂತಿಕೆಯಿಂದ ಕೂಡಿದೆ. ಇಲ್ಲಿನ ಜನಪದ ಕಲೆಯು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಕಲಾವಿದರನ್ನು ಹುಟ್ಟು ಹಾಕಿದ ಜಿಲ್ಲೆಯಾಗಿದ್ದು, ಇದಕ್ಕೆ ವರನಟ ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ಕೊಡುಗೆಯಾಗಿ ನೀಡಿರುವುದೇ ಸಾಕ್ಷಿಯಾಗಿದೆ. ಇವರ ಆದರ್ಶ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಹಾಗಾಗಿ ಇವರ ಜೀವನ ಚರಿತ್ರೆಯನ್ನು ಯುವ ಪೀಳಿಗೆಗೆ ತಿಳಿಸುವ ಸಲುವಾಗಿ ಜಿಲ್ಲೆಯಲ್ಲಿ ಮ್ಯೂಸಿಯಂ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಯುವ ಪೀಳಿಗೆ ಶಿಕ್ಷಣದ ಜತೆಗೆ ಸಾಧಕರ ಜೀವನ ಚರಿತ್ರೆಯನ್ನು ಅರಿಯುವುದರ ಜತೆಗೆ ಹಿರಿಯರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಯಶಸು ಸಾಧಿಸಬೇಕು ಎಂದು ತಿಳಿಸಿದರು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಗೀತಾ ಭತ್ತದ್, ಕೈಲಾಸ್ ಮೂರ್ತಿ, ನಂಜೇಗೌಡ, ಡಾ.ಪ್ರೇಮ ವೈ.ಕೆ. ಮೋಳೆ, ಮಹದೇವಪ್ರಸಾದ್ ಹಾಗೂ ಹರೀಶ್ ಮೊಗಣ್ಣ ಅವರಿಗೆ ಜನಪರ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎಸ್.ದತ್ತೇಶ್‌ಕುಮಾರ್, ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಂ ಮಹೇಶ್ ಚಿಕ್ಕಲ್ಲೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷ ಕಂದವೇಲು, ಪಪಂ ಉಪಾಧ್ಯಕ್ಷ ಆನಂದ್‌ಕುಮಾರ್, ಮೈಸೂರು ಕಲಾ ಕೂಟ ಅಧ್ಯಕ್ಷ ಚಂದ್ರಶೇಖರ್, ಪ್ರಾಂಶುಪಾಲೆ ಎಸ್. ಚಂದ್ರಮ್ಮ, ಸಂಚಾಲಕ ಮನೋಜ್‌ಕುಮಾರ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net