

ಕಾರವಾರ: ಹೊಸ 8 ಎಎಲ್‌ಎಚ್ ಹೆಲಿಪಾಫ್ಟರ್ ಒದಗಿಸುವಂತೆ ಸರ್ಕಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡೆಂಟ್ ಇನ್ಸ್ಪೆಕ್ಟರ್ ಜನರಲ್ ಮನೋಜ ಬಾಡಕರ್ ತಿಳಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಭಾರತೀಯ ಇಂಡಿಯನ್ ಕೋಸ್ಟ್ ಗಾರ್ಡ್ ಇದುವರೆಗೆ 8 ಅಡ್ವಾನ್ಸ್ಡ್ ಎಎಲ್‌ಎಚ್ ಹೆಲಿಕಾಫ್ಟರ್‌ಗಳಿವೆ.
ಸಮುದ್ರದ ದಡದ ರಕ್ಷಣೆ ಹಾಗೂ ಗಸ್ತಿನ ಕಾರ್ಯಾಚರಣೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಬೇಡಿಕೆ ಸಲ್ಲಿಸಲಾಗಿದೆ ಎಂದರು. ಇಂದಿನ ಆಧುನಿಕ ಸಂವಹನ ಹಾಗೂ ಸಂಪರ್ಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ನಡೆದಿದೆ.
ಭಾರತದ 7500 ಕಿಮೀ ಕರಾವಳಿ ತೀರದಲ್ಲಿ ಕರಾವಳಿ ಭದ್ರತಾ ಸಂಪರ್ಕ(ಸಿಎಸ್‌ಎನ್)ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ 30 ರಿಂದ 35 ನಾಟಿಕಲ್ ಮೈಲ್ ದೂರದಲ್ಲಿ ರಡಾರ್ ಸ್ಟೇಷನ್ ಸಿದ್ಧ ಮಾಡಲಾಗುತ್ತಿದೆ. ಅದರಲ್ಲಿ ಸುಮಾರು 50 ನಾಟಿಕಲ್ ಮೈಲ್ ದೂರದ ಹಡಗು, ದೊಡ್ಡ ದೋಣಿಗಳ ಸಂಚಾರ, ಕಾರ್ಯಚಟುವಟಿಕೆ ಸೆರೆ ಹಿಡಿಯಬಹುದಾದ ಹೈ ಡೆಫಿನೀಶನ್ ಕ್ಯಾಮರಾಗಳಿವೆ.
ಅಲ್ಲದೆ, ಅಲ್ಲಿ ಹವಾಮಾನ ಆಧಾರಿತ ಮಾಹಿತಿ ನೀಡಬಹುದಾದ ಸಲಕರಣೆಗಳನ್ನು ಅಲ್ಲಿ ಅಳವಡಿಸಲಾಗಿದೆ. ಈ ಸಿಎಸ್‌ಎನ್ ವ್ಯವಸ್ಥೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ನಿರ್ವಹಿಸುತ್ತಿದ್ದು, ಭಾರತೀಯ ನೌಕಾಸೇನೆ, ಸ್ಥಳೀಯ ಕರಾವಳಿ ಕಾವಲುಪಡೆ, ಬಂದರು ಮುಂತಾದ ಇಲಾಖೆಗಳ ಜತೆ ಮಾಹಿತಿ ಹಂಚಿಕೊಳ್ಳಲಿದೆ. ಇಲ್ಲಿ ಅಳವಡಿಸಲಾದ ಸಿಎಸ್‌ಎನ್ ಕ್ಯಾಮೆರಾಗಳ ಮೂಲಕ ಮುಂಬೈ ಅಥವಾ ನವದೆಹಲಿಯಲ್ಲಿ ಕುಳಿತು ಸಮುದ್ರದ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಬಹುದು.
ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ರಡಾರ್ ಹಾಗೂ ಕೆಮೆರಾ ಅಳವಡಿಕೆ ಕಾರ್ಯ ಎರಡನೇ ಹಂತದಲ್ಲಿ ನಡೆಯುತ್ತಿದೆ. ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಟೆಂಡರ್ ಪಡೆದು ಕಾಮಗಾರಿ ನಡೆಸಿದ್ದು, ಕಾರ್ಯಾಚರಣೆ ಇನ್ನು ಮೂರು ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದು ಕರಾವಳಿ ಭದ್ರತೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಲಿದೆ ಎಂದರು.
ಅಮದಳ್ಳಿಯಲ್ಲಿ ಖಾಸಗಿ ಜಮೀನು ಖರೀದಿ ಮಾಡಿ ಕಚೇರಿ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾರ್ಯ ನಡೆದಿದೆ. ಮಿಲಿಟರಿ ಇಂಜಿನಿಯರಿಂಗ್ ಸರ್ವೀಸ್(ಎಂಇಎಸ್)ಗೆ ಗುತ್ತಿಗೆ ನೀಡಲಾಗಿದೆ. ಇನ್ನು ಎರಡುವರೆ ವರ್ಷದಲ್ಲಿ ಕಾಮಗಾರಿ ಮುಗಿದು ಕಚೇರಿ ಅಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಹೋವರ್ ಕ್ರಾಫ್ಟ್ ನಿಲ್ದಾಣಕ್ಕಾಗಿ ಹಿಂದೆ ಜಿಲ್ಲಾಡಳಿತ ನೀಡಿದ್ದ ಜಮೀನನ್ನು ವಾಪಸ್ ಪಡೆದಿದೆ. ಬೇರೆ ಜಮೀನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಮನೋಜ ಬಾಡಕರ್ ತಿಳಿಸಿದರು. ಕಾರವಾರದ ಮೀನುಗಾರಿಕೆ ಬಂದರಿನಾಚೆಯ ತಡೆಗೋಡೆ ಸಮೀಪ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗು ನಿಲ್ದಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಕರ್ನಾಟಕ ಸರ್ಕಾರ ಅದಕ್ಕೆ ಒಪ್ಪಿಗೆ ಕೊಡಬೇಕಿದೆ. ನಂತರ ನಾವು ಭಾರತ ಸರ್ಕಾರದಿಂದ ಅನುದಾನ ಪಡೆದು ಮುಂದಿನ ಪ್ರಕ್ರಿಯೆ ನಡೆಸಲಿದ್ದೇವೆ ಎಂದರು.
ಭಾರತೀಯ ತಟ ರಕ್ಷಕ ದಳದಲ್ಲಿ 37 ವರ್ಷಗಳ ಸೇವೆ ಸಲ್ಲಿಸಿದ ನಂತರ ಇದೇ ಸೆ. 30 ರಂದು ಸೇವಾ ನಿವೃತ್ತಿ ಹೊಂದಲಿದ್ದೇನೆ. ಕಾರವಾರ ನನ್ನ ಹುಟ್ಟೂರು. ಇಲ್ಲಿಯೇ ಬಂದು ವಾಸಿಸಲಿದ್ದೇನೆ. ನಂತರ ಸಾಮಾಜಿಕ ಕಾರ್ಯ ಮಾಡುವ ಇಚ್ಛೆ ಹೊಂದಿದ್ದೇನೆ ಎಂದರು. ರಾಜಕೀಯ ಪ್ರವೇಶದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ಬಗ್ಗೆ ಮಾತನಾಡುವುದಿಲ್ಲ. ನಿವೃತ್ತಿಯಾದ ನಂತರ ಯೋಚಿಸುತ್ತೇನೆ ಎಂದರು. ಮನೋಜ ಬಾಡಕರ್ ಬಿಜೆಪಿ ಸೇರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ.
ತಟ ರಕ್ಷಕ ದಳದ ಅತಿ ದೊಡ್ಡ ಗಸ್ತು ಹಾಗೂ ಕಾರ್ಯಾಚರಣೆ ನೌಕೆಗಳಲ್ಲಿ ಒಂದಾದ ಐಸಿಜಿ ಸಾಮ್ರಾಟ್ (ಸಿಗಿ-47) ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿ ಲಂಗರು ಹಾಕಿದೆ.
12.9 ಮೀಟರ್ ಅಗಲ, 105 ಮೀಟರ್ ಉದ್ದವಿರುವ ಬೃಹತ್ ನೌಕೆ ಇದಾಗಿದ್ದು, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಎರಡು ಎಲ್‌ಎಲ್‌ಎಚ್ ಹೆಲಿಕಾಫ್ಟರ್‌ಗಳನ್ನು ಏಕ ಕಾಲದಲ್ಲಿ ಇದರ ಮೇಲೆ ಇಳಿಸಬಹುದಾಗಿದೆ.
ಐದು ಅಂತಸ್ಸಿನ ನೌಕೆಯಲ್ಲಿ 80 ರಷ್ಟು ಸಿಬ್ಬಂದಿ, ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಎರಡು ದಿನದ ಭೇಟಿಗೆ ಹಡಗು ಕಾರವಾರಕ್ಕೆ ಬಂದಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡೆಂಟ್ ಇನ್ಸ್ಪೆಕ್ಟರ್ ಜನರಲ್ ಮನೋಜ ಬಾಡಕರ್ ಹಡಗಿಗೆ ಭೇಟಿ ನೀಡಿ, ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಭಾರತೀಯ ಕೋಸ್ಟ್ ಗಾರ್ಡ್ ಬಗ್ಗೆ ತಿಳಿಯಲು ಈ ಸಂಪರ್ಕ ಒತ್ತಿ: