ಯಗಚಿ ನದಿ ಅಭಿವೃದ್ಧಿಗೆ 180 ಕೋಟಿ ರೂ: ಕೇಂದ್ರಕ್ಕೆ ಪ್ರಸ್ತಾವನೆ: ಸಿ.ಟಿ.ರವಿ

CT Ravi Prog. 2
Published on

ಚಿಕ್ಕಮಗಳೂರು: ಅಹಮದಾಬಾದ್‍ನ ಸಬರ್‍ಮತಿ ರಿವರ್ ಫ್ರೆಂಟ್ ಮಾದರಿಯಲ್ಲಿ ಯಗಚಿ ನದಿಗೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ 180 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವರೊಂದಿಗೆ ಚರ್ಚೆ ಮಾಡಲಾಗಿದ್ದು, ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದರು.

400 ಕೋಟಿ ರೂ.ಗೂ ಹೆಚ್ಚು ಅನುದಾನ:

ನಗರಕ್ಕೆ ವಿವಿಧ ಯೋಜನೆಗಳಿಂದ ಮೂರ್ನಾಲ್ಕು ವರ್ಷದಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಅನುದಾನ ಮಂಜೂರು ಮಾಡಲಾಗಿದ್ದು ಪೂರ್ಣಗೊಂಡಿರುವ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಲಾಗುತ್ತಿದೆ. ಜನರ ಆರೋಗ್ಯ ದೃಷ್ಟಿಯಿಂದ ತಿಲಕ್‍ಪಾರ್ಕ್, ಜಿಲ್ಲಾ ಆಟದ ಮೈದಾನ, ಹೌಸಿಂಗ್‍ಬೋರ್ಡ್, ಬೈಪಾಸ್ ರಸ್ತೆ ಸೇರಿ ಹಲವೆಡೆ ಓಪನ್ ಜಿಮ್ ವ್ಯವಸ್ಥೆ ಮಾಡಲಾಗಿದ್ದು ಇನ್ನೂ ಐದು ಕಡೆಗೆ ಅಳವಡಿಸಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಅನುದಾನ ಕೋರಿದ್ದೇನೆ. ಶಾಸಕ, ಸಂಸದರ ಅನುದಾನದಲ್ಲಿ ವಿವಿಧೆಡೆ ಶುದ್ಧ ಗಂಗಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. 26ನೇ ವಾರ್ಡ್‍ಗೆ ಕಳೆದ ಐದು ವರ್ಷದಲ್ಲಿ 208 ಕೋಟಿ ರೂ. ಮಂಜೂರು ಮಾಡಿಸಲಾಗಿದೆ ಎಂದು ವಿವರಿಸಿದರು.

ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ:

ನಗರದ ಸಮಸ್ಯೆಗಳನ್ನು ಆದ್ಯತೆಯಾಗಿ ಪರಿಗಣಿಸಿ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯುವ ನೀರಿನ ಯೋಜನೆ ಕಾಮಗಾರಿ ಶೇ.90 ಮುಗಿದಿದ್ದು ಒಳಚಂರಂಡಿ ವ್ಯವಸ್ಥೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಕಳೆದ ಸಾಲಿನಲ್ಲಿ 6 ಕೋಟಿ, ಈಗ 10 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಲಾಗಿದೆ. ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಆರಂಭವಾಗಿದ್ದು 36 ಕೋಟಿಯಲ್ಲಿ ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಆರಂಭವಾಗುತ್ತದೆ. ಏಪ್ರಿಲ್ ಅಂತ್ಯದಲ್ಲಿ ಮೂಲ ಸೌಕರ್ಯ ಸಚಿವರು ಆಗಮಿಸಲಿದ್ದು ವಿಮಾನ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಳ್ಳಲು ವ್ಯಕ್ತಿಗತವಾಗಿ ಮಾತನಾಡಿದ್ದು ಚಾಲನೆ ನೀಡುತ್ತೇವೆ. ಮೆಡಿಕಲ್ ಕಾಲೇಜು ನಿರ್ಮಾಣದ ಬಗ್ಗೆ ಲೇವಡಿ ಮಾಡುತ್ತ್ತ, ಕಡೂರು-ಚಿಕ್ಕಮಗಳೂರು ರಸ್ತೆ ಕಡೆ ಬೊಟ್ಟು ಮಾಡುತ್ತಿದ್ದವರಿಗೆ ಅಭಿವೃದ್ಧಿ ಮೂಲಕ ಉತ್ತರಿಸಿದ್ದೇವೆ ಎಂದರು.

ಗುಂಡಿ ಮುಚ್ಚುವುದು ಗುತ್ತಿಗೆದಾರನ ಹೊಣೆ:

ನಗರದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸವೂ ಆ ಗುತ್ತಿಗೆದಾರನ ಹೊಣೆಗಾರಿಕೆ. ಪೈಪ್‍ಲೈನ್‍ಗಾಗಿ ತೆಗೆದಿರುವ ಗುಂಡಿ ಮುಚ್ಚಿದ ಮೇಲೆ ಡಾಂಬರೀಕರಣ ಮಾಡಬೇಕು. ಕೆಲವರು ಅವರ ಅ„ಕಾರದ ಅವಧಿಯಲ್ಲಿ ಅಭಿವೃದ್ಧಿಗೆ ಬಿಡಿಗಾಸೂ ತರದೆ ಪ್ರತಿನಿತ್ಯ ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ನಗರದ ಅಭಿವೃದ್ಧಿಗೆ ನಿಮ್ಮ ಪಕ್ಷದ ಕೊಡುಗೆ ಏನು? ರಾಜಕಾರಣವನ್ನು ರಾಜಕಾರಣದಲ್ಲಿಯೇ ಎದುರಿಸುತ್ತೇವೆ ಎಂದರು. ಸಿಡಿಎ ಅಧ್ಯಕ್ಷ ಆನಂದ್, ನಗರಸಭೆ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಎಚ್.ಡಿ.ತಮ್ಮಯ್ಯ, ಶ್ರೀನಿವಾಸ್, ವರಸಿದ್ಧಿ ವೇಣುಗೋಪಾಲ್, ಮಧುಕುಮಾರ್ ರಾಜ್ ಅರಸ್, ಟಿ.ರಾಜಶೇಖರ್, ಐ.ಕೆ.ಓಂಕಾರೇಗೌಡ, ನಗರಸಭೆ ಇಂಜಿನಿಯರ್ ರಶ್ಮಿ, ಮಧು, ಎನ್.ಆರ್.ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net