

ಕಂಪ್ಲಿ: ಮೆಣಸಿನಕಾಯಿಗೆ ಬೆಂಬಲ ಬೆಲೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇದನ್ನೂ ಓದಿ:ನಗರೀಕರಣದಿಂದ ಕೃಷಿಗೆ ಹೊಡೆತ
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ರೈತರಿಗೆ ಕೃಷಿ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾನೂನು ತೊಡಕುಗಳನ್ನು ನಿವಾರಿಸಿ ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗುವುದು. ಕೃಷಿ ಸಂಶೋಧನಾ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿತರಣಾ ನಾಲೆಗಳ ಮೂಲಕ ಕಡೆ ಅಂಚಿನ ಭೂಮಿಗೂ ನೀರು ಒದಗಿಸುವುದು ಹಾಗೂ ಕೃಷಿ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್ ಮಾತನಾಡಿ, 40 ರೈತರಿಗೆ ಕೃಷಿ ಯಂತ್ರ ಯೋಜನೆಯಡಿ ರಿಯಾಯಿತಿ ದರದಲ್ಲಿ ಟಿಲ್ಲರ್ ಹಾಗೂ ವಿವಿಧ ಯಂತ್ರೋಪಕರಣ, ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ, ಹಸಿರೆಲೆ ಗೊಬ್ಬರ ಯೋಜನೆಯಡಿ ಸೆಣಬು ಬಿತ್ತನೆ ಬೀಜ, ತಾಡಪಾಲ್ ವಿತರಿಸಲಾಗಿದೆ. ಕೂರಿಗೆ ಬಿತ್ತನೆ ಅನುಸರಿಸಿ ಮಿಶ್ರ ಬೆಳೆ ಬೆಳೆಯಬೇಕು. ಕೃಷಿ ಪರಿಕರ ಮಾರಾಟಗಾರರಲ್ಲಿ ಬಿತ್ತನೆ ಬೀಜ, ಔಷಧ, ಕೀಟನಾಶಕಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಳಪೆ ಎಂದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಎಸ್.ಶಿವರಾಜ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎನ್.ಮಂಜುನಾಥ, ಎಡಿಎ ಎಸ್.ವಿ.ಪಾಟೀಲ್, ಡಿಎಟಿಸಿ ಎಡಿಗಳಾದ ಡಾ.ಸಿ.ಆರ್.ಅಭಿಲಾಷ, ವಿದ್ಯಾವತಿ ಹೊಸಮನಿ, ಕೃಷಿ ಅಧಿಕಾರಿ ಕೆ.ಸೋಮಶೇಖರ್, ಎಎಒ ಜ್ಯೋತಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ವಿಪ್ರದ ನಾರಾಯಣಪ್ಪ, ಪ್ರಮುಖರಾದ ಕೆ.ಶ್ರೀನಿವಾಸ ರಾವ್, ಡಾ.ಎ.ಸಿ.ದಾನಪ್ಪ, ಆದೋನಿ ರಂಗಪ್ಪ, ಬಿ.ವಿ.ಗೌಡ, ತಿಮ್ಮಪ್ಪ ನಾಯಕ, ಕೆ.ರಮೇಶ್, ಸಿ.ಎ.ಚನ್ನಪ್ಪ ಇತರರಿದ್ದರು.