ಮಾಲೂರು ಅಭಿವೃದ್ಧಿಗೆ ₹ 30 ಕೋಟಿಗೆ ಪ್ರಸ್ತಾವನೆ

11
Published on

ಮಾಲೂರು: ಪುರಸಭೆ ವ್ಯಾಪ್ತಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಲ್ಲಿ 30 ಕೋಟಿ ರೂ.ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದ ಬಳಿಕ ವಿವಿಧ ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಿ, ಪಟ್ಟಣದ ಎಲ್ಲ 27 ವಾರ್ಡ್‌ಗಳಲ್ಲಿ ರಸ್ತೆಗಳ ಡಾಂಬರೀಕರಣ, 7,000 ನಲ್ಲಿಗಳಿಗೆ ಮೀಟರ್ ಅಳವಡಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು.

ಪಟ್ಟಣದ ಕೆಲವೇ ವಾರ್ಡ್‌ಗಳಿಗೆ ಬರುತ್ತಿರುವ ಯರಗೋಳ್ ಯೋಜನೆಯ ನೀರನ್ನು ಎಲ್ಲ 27 ವಾರ್ಡ್‌ಗಳಿಗೂ ಪೂರೈಸಲು ಕ್ರಮವಹಿಸಲಾಗುವುದು. ಪಟಾಲಮ್ಮ ದೇವಾಲಯದ ಬಳಿಯ ನೂತನ ಬಡಾವಣೆಯಲ್ಲಿ 7 ಲಕ್ಷ ಲೀಟರ್ ಶೇಖರಣೆಯಾಗುವ ಓವರ್ ಹೆಡ್ ಟ್ಯಾಂಕ್ ಮತ್ತು ವೈಟ್ ಗಾರ್ಡನ್ ಬಳಿ 7 ಲಕ್ಷ ಲೀಟರ್ ಶೇಖರಣೆಯ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಪಟ್ಟಣವಾಸಿಗಳ ನೀರಿನ ಬವಣೆ ನಿವಾರಿಸಲಾಗುವುದು. ರೈಲ್ವೆ ಟ್ರಂಚ್ ಲೆಸ್ ಪೈಪ್ ಲೈನ್ ಅಳವಡಿಕೆಗೂ ಕ್ರಮವಹಿಸಲಾಗುವುದು ಎಂದು ಶಾಸಕ ನಂಜೇಗೌಡ ತಿಳಿಸಿದರು.

ವರ್ಷಾಂತ್ಯಕ್ಕೆ ಬಸ್ ನಿಲ್ದಾಣ ಕಾಮಗಾರಿ ಆರಂಭ: ಪಟ್ಟಣದ ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಆರಂಭಿಸಲಾಗುವುದು. ಪಟ್ಟಣದ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಮೀಸಲಿರುವ ಸಿಎ ನಿವೇಶನಗಳ ಪರಿಶೀಲನೆ ಮಾಡಲಾಗುವುದು ಎಂದು ಶಾಸಕ ನಂಜೇಗೌಡ ತಿಳಿಸಿದರು. ಇದೇ ವೇಳೆ ಪುರಸಭೆ ಸದಸ್ಯ ಎ.ರಾಜಪ್ಪ ಅವರನ್ನು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ, ಇನ್ನೊಬ್ಬ ಸದಸ್ಯ ಬುಲೆಟ್ ವೆಂಕಟೇಶ್ ಅವರನ್ನು ಯೋಜನಾ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ವಾಡಲಾಯಿತು. ಪುರಸಭೆ ಅಧ್ಯಕ್ಷ ಆರ್.ಕೋಮಲಾ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಪ್ರದೀಪ್ ಕುವಾರ್, ಸದಸ್ಯರಾದ ಮುರಳೀಧರ್ ಎ.ರಾಜಪ್ಪ, ಬುಲೆಟ್ ವೆಂಕಟೇಶ್, ಇಮ್ತಿಯಾಜ್ ಖಾನ್, ವೇಮನ, ಭಾನುತೇಜ ಇದ್ದರು.

ತೆರಿಗೆ ವಸೂಲಿಗೆ ಕ್ರಮ: ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಎ.ರಾಜಪ್ಪ ವಾತನಾಡಿ, ಪಟ್ಟಣದ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಪೇಪರ್ ಬಳಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಪ್ಲಾಸ್ಟಿಕ್ ಪೇಪರ್ ಬಳಕೆಗೆ ನಿಷೇಧಿಸಲಾಗುವುದು. ಮತ್ತು ಹೋಟೆಲ್‌ಗಳಲ್ಲಿ ಊಟ ಸೇವಿಸಲು ತಟ್ಟೆಗಳಲ್ಲಿ ಎಲೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಲಾಡ್ಜ್‌ಗಳಿಂದ ಮತ್ತು ಖಾಸಗಿ ಸಭಾಮಂಟಪಗಳಿಂದ ತೆರಿಗೆ ವಸೂಲಾತಿ ಸಮರ್ಪಕವಾಗಿಲ್ಲ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳೊಂದಿಗ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪುರಸಭೆಗೆ ತೆರಿಗೆ ಸಂಗ್ರಹವಾದರೆ ಪಟ್ಟಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net