

ಅಳವಂಡಿ: ಪ್ರವಾದಿ ಮುಹಮ್ಮದ್ ಪೈಗಂಬರರು ಶಾಂತಿ, ಸೌಹಾರ್ದ, ಸಮಾನತೆ ಸಂದೇಶ ಸಾರಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಸಂತರಾಗಿದ್ದಾರೆ. ಪ್ರತಿಯೊಂದು ಧರ್ಮ ಶಾಂತಿ ಸಂದೇಶ ಸಾರುತ್ತವೆ ಎಂದು ಸೈಯದ್ ಷಾ ಮುಸ್ತಫಾ ಖಾದ್ರಿ ಗುರುಗಳು ಹೇಳಿದರು.
ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವ ಧರ್ಮದವರು ಸಹೋದರರಂತೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸುತ್ತಾರೆ. ಎಲ್ಲ ಧರ್ಮ ಗ್ರಂಥಗಳು ಶಾಂತಿ ಸಂದೇಶವನ್ನು ಸಾರುತ್ತವೆ. ಇರುವಷ್ಟು ದಿನ ಸಂತೋಷದಿಂದ ಜೀವಿಸಬೇಕು ಎಂದರು. ನಂತರ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾದಿಂದ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜುಮ್ಮಾ ಮಸೀದಿವರೆಗೆ ತಲುಪಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಪ್ರಮುಖರಾದ ಖಾದರಸಾಬ್ ಆಲೂರು, ಹೊನ್ನಪ್ಪಗೌಡ ಪಾಟೀಲ್, ಕನಕನಗೌಡ ಪಾಟೀಲ್, ಮರಿಯಪ್ಪ ಕುರ್ತಕೋಟಿ, ಲೋಕೇಶ, ಗುಡದಪ್ಪ, ದೇವೇಂದ್ರ ಪಾಟೀಲ್, ಮೋದಿನಸಾಬ್ ಆಲೂರು, ಮುಸ್ತಫಾ ಕೆಂಪಸಾಬಣ್ಣವರ, ಖಾದರಸಾಬ್ ಮೇಗಳಮನಿ, ಕೊಟೆಪ್ಪ ರ್ಕುಕೋಟಿ, ಶಬ್ಬೀರಸಾಬ್ ಮೇಗಳಮನಿ, ಕರೀಮಸಾಬ್ ಆಲೂರು, ಮುರ್ತುಜಾಸಾಬ್ ಕಡೇಮನಿ, ಮೈಬುಸಾಬ್ ಹೊಸಮನಿ, ಗೂಡುಸಾಬ್ ಅಡವಿಸೊಂಪುರ ಇತರರಿದ್ದರು.