

ಶಿವಮೊಗ್ಗ: ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮಹಮ್ಮದ್ ಜೀವನ ಸಂದೇಶ ಸಾರುವ ಅಭಿಯಾನ ಅಕ್ಟೋಬರ್ 6ರವರೆಗೆ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟಕ ಮಹಮ್ಮದ್ ಇಲಿಯಾಜ್ ತಿಳಿಸಿದರು.
ಗುರುವಾರದಿಂದಲೇ ಅಭಿಯಾನ ಆರಂಭಿಸಲಾಗಿದೆ. ರಾಜ್ಯಾದ್ಯಂತ ನಡೆಯುವ ಅಭಿಯಾನದ ನಿಮಿತ್ತ ಶಿವಮೊಗ್ಗದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಭಿಯಾನದ ಪ್ರಯುಕ್ತ ನಗರದಲ್ಲಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ ಮಾಡಲಾಗುವುದು. ಪ್ರವಾದಿ ಕುರಿತ ಪುಸ್ತಕ ಬಿಡುಗಡೆ, ಪ್ರಬಂಧ ಸ್ಪರ್ಧೆ, ಗಿಡ ನೆಡುವುದು ಹಾಗೂ ಶುಚಿತ್ವ ಅಭಿಯಾನ, ವೃದ್ಧಾಶ್ರಮ ಭೇಟಿ, ವಿಚಾರಗೋಷ್ಠಿ, ಸೀರತೌ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದರು.
ಲೇಖಕ ಯೋಗೇಶ್ ಮಾಸ್ಟರ್ ಕನ್ನಡಕ್ಕೆ ಅನುವಾದಿಸಿದ ನನ್ನ ಅರಿವಿನ ಪ್ರವಾದಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕಸಾಪ ಡಿ.ಮಂಜುನಾಥ, ಇಡೀ ವಿಶ್ವದಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸುವ ಮನಸ್ಥಿತಿ ನಮ್ಮಲ್ಲಿ ಬೆಳೆಯಬೇಕಿದೆ. ಧರ್ಮಗಳು ಯಾವುದೇ ವೈಯಕ್ತಿಕ ವಿಚಾರವನ್ನು ಹೇಳುವುದಿಲ್ಲ. ಬಾಂಧವ್ಯಗಳನ್ನು ಬೆಸೆಯುತ್ತವೆ. ಅಂತಹ ಕೃತಿಯನ್ನು ನಾಗೇಶ್ ಮಾಸ್ತರ್ ರಚಿಸಿದ್ದು, ಶಾಂತಿ ಪ್ರಕಾಶನದ ಈ ಪುಸ್ತಕ ಪ್ರವಾದಿ ಮಹಮ್ಮದ್ ಅವರ ಸದ್ಗುಣ, ಕ್ಷಮಾಗುಣ, ಏಕ ದೇವತ್ವದ ಪ್ರತಿಪಾದನೆಯನ್ನು ನೀಡಿದೆ ಎಂದರು.
ಶಿವಮೊಗ್ಗ ಜಿ¯್ಲÁ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮನುಷ್ಯ ಮನುಷ್ಯನನ್ನೇ ನಂಬದ ಸ್ಥಿತಿಗೆ ಬಂದಿದೆ. ಮನುಷ್ಯನ ವಿಶಾಲ ಮನಸ್ಸು ಸತ್ತೇ ಹೋಗಿದೆ. ಇಂತಹ ಕಾಲದಲ್ಲಿ ಪ್ರವಾದಿಯ ಕುರಿತ ಈ ಲೇಖನ ನಮ್ಮ ಬಾಂಧವ್ಯವನ್ನು ಬೆಸೆಯುವ ಕೊಂಡಿಯಾಗುತ್ತದೆ ಎಂದರು. ಅಭಿಯಾನದ ಸಂಚಾಲಕ ಸಯ್ಯದ್ ಬಿಲಾಲ್ ಉಮ್ರಿ, ಸಲೀಂ ಅಹಮದ್, ಅಬ್ದುಲ್ ನಹಾಲ್ ಇದ್ದರು.