ಮಳೆಗೆ 82.17 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿ

rain damag
ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಸಮೀಪದ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು.
Published on

ಚಿಕ್ಕಮಗಳೂರು: ಜಿಲ್ಲಾದ್ಯಂತ ಮಳೆಯಾಗುತ್ತಿದ್ದು ಬೆಳೆ, ಮನೆ, ಪ್ರಾಣಹಾನಿಗಳು ಸಂಭವಿಸಿವೆ. ಮಳೆಗೆ ಅಂದಾಜು 82.17 ಕೋಟಿ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದೆ.

ರಾಗಿ, ಜೋಳ, ಕಾಫಿ, ಅಡಕೆ, ಶುಂಠಿ, ಟೊಮ್ಯಾಟೊ, ಆಲೂಗೆಡ್ಡೆ ಬೆಳೆಗಳು ಹಾನಿಯಾಗಿವೆ. ದನದ ಕೊಟ್ಟಿಗೆ, ಸರ್ಕಾರಿ ಶಾಲಾ ಕಟ್ಟಡಗಳು ಕುಸಿದಿವೆ. ರಸ್ತೆಗಳು ಬಿರುಕು ಬಿಟ್ಟಿದ್ದು, ಸೇತುವೆಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮದಡಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಜಿಲ್ಲೆಯಲ್ಲಿ 97 ಮನೆಗಳಿಗೆ ಹಾನಿಯಾಗಿದ್ದು, 4 ಜಾನುವಾರುಗಳು ಮೃತಪಟ್ಟಿವೆ. 183 ಕಡೆಗಳಲ್ಲಿ 61 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ, 6,600 ಕಡೆಗಳಲ್ಲಿ 5,815 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ಹಾಳಾಗಿದೆ. ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲೂಕಿನಲ್ಲೇ ಅತಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಹಾನಿಗೀಡಾಗಿರುವ ಆಸ್ತಿಯಲ್ಲಿ ರಸ್ತೆ, ಸೇತುವೆಗಳೇ ಹೆಚ್ಚು. ಪಿಡಬ್ಲುೃಡಿ ವ್ಯಾಪ್ತಿಯಲ್ಲಿ 80.21 ಕಿಲೋ ಮೀಟರ್ ಉದ್ದದ 36.92 ಕೋಟಿ ರೂ. ಮೌಲ್ಯದ ರಸ್ತೆ, 7.80 ಕೋಟಿ ಮೌಲ್ಯದ 16 ಸೇತುವೆಗಳು, 26 ಲಕ್ಷ ಮೌಲ್ಯದ 5 ಸರ್ಕಾರಿ ಕಟ್ಟಡ ಸೇರಿ 44.98 ಕೋಟಿ ರೂ. ಮೊತ್ತದ ಆಸ್ತಿ ಹಾನಿಗೀಡಾಗಿದೆ.
ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಯ 1.80 ಕೋಟಿ ಮೌಲ್ಯದ ಕಟ್ಟಡಗಳು, 2.50 ಕೋಟಿ ಮೌಲ್ಯದ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ತಂತಿಗಳು ಹಾನಿಯಾಗಿವೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 191 ಕಿಲೋ ಮೀಟರ್ ರಸ್ತೆ, 22 ಸೇತುವೆಗಳು ಸೇರಿದಂತೆ 32.88 ಕೋಟಿ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದೆ ಎಂದು ಅಂದಾಜಿಸಿದ್ದಾರೆ.
ಕಡೂರು ತಾಲೂಕಿನ ಪುರ ಗ್ರಾಮದಲ್ಲಿ ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದರೆ, ಮೂಡಿಗೆರೆಯ ದಾರದಹಳ್ಳಿಯಲ್ಲಿ ಹಳ್ಳದಲ್ಲಿ ಮಹಿಳೆ ಮತ್ತು ಹೊಸಸಿದ್ಧರಹಳ್ಳಿಯಲ್ಲಿ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರ ಕುಟುಂಬಕ್ಕೆ ಜಿಲ್ಲಾಡಳಿತ ಪರಿಹಾರ ಕಲ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net