ಪುರಸಭಾ ವ್ಯಾಪ್ತಿಯ ಆಸ್ತಿ ಶಾಸಕರ ಕುಟುಂಬದಿಂದ ಕಬಳಿಕೆ

c.s. niranjana kumar (bjp)
ನಿರಂಜನಕುಮಾರ್
Published on

ಗುಂಡ್ಲುಪೇಟೆ: ಪುರಸಭಾ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಶಾಸಕ ಗಣೇಶ್ ಪ್ರಸಾದ್ ಅವರ ಕುಟುಂಬ ಕಬಳಿಕೆ ಮಾಡಲು ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಆರೋಪಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಪಟ್ಟಣದ ಜಾಗಗಳಿಗೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಬಂದಿದೆ. ಸಾರಿಗೆ ಬಸ್ ನಿಲ್ದಾಣದ ಎದುರು ಇರುವ ಸ್ಥಳ ಪುರಸಭಾ ಜಾಗಕ್ಕೆ ಸೇರಿದ್ದರೂ ಅಲ್ಲಿ ದಿ. ಮಾಜಿ ಸಚಿವ ಮಹದೇವ ಪ್ರಸಾದ್ ಅವರ ಕುಟುಂಬ ಸಂಗಮ ಟ್ರಸ್ಟ್ ಹೆಸರಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿದೆ. ಸದ್ಯ ಬಿ.ಎನ್.ರಸ್ತೆಯಲ್ಲಿ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಪುರಸಭಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಂಡ್ಲುಪೇಟೆ ಟೌನ್ ಊಟಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ನೇ ವಿಭಾಗ ಗಂಗಾಬಾರ್ ಪಕ್ಕದಲ್ಲಿರುವ ಅ.ನಂ.1621/1621ರ ಪುರಸಭೆಗೆ ಸೇರಿದ ಜಾಗವನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಕಾನೂನು ಕ್ರಮ ಪಾಲಿಸದೇ ಕಟ್ಟಡ ಕಾಮಗಾರಿಯನ್ನು ಕೈಗೊಂಡಿದ್ದಾರೆ ಎಂದು ಸೋವವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಬಗ್ಗೆ ಪಟ್ಟಣದ ನಾಗರಿಕರು ಮಾಹಿತಿ ಹಕ್ಕು ಮೂಲಕ ಮೂಲ ದಾಖಲಾತಿ ಕೇಳಿದಾಗ ಕೊಡುತ್ತಿಲ್ಲ. ಸ್ವಂತ ಆಸ್ತಿ ಎಂಬುದಕ್ಕೆ ದಾಖಲಾತಿ ಇಲ್ಲ. ಪುರಸಭಾ ಆಸ್ತಿಯನ್ನು ಕಬಳಿಕೆ ಮಾಡಿದ್ದಾರೆ. ಅಧಿಕಾರಿಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಎಂದು ನೋಟಿಸ್ ನೀಡಿದ್ದರೂ ಲೆಕ್ಕಿಸದೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಡೀಪುರದ ರಸ್ತೆಗಳಲ್ಲಿ ರಾತ್ರಿ ಸಂಚಾರ ಬಂದ್ ಮಾಡಿರುವುದರ ಬಗ್ಗೆ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಸಂಸದೆ ಪ್ರಿಯಾಂಕಾ ಗಾಂಧಿ ಅವರು ರಾತ್ರಿ ಸಂಚಾರ ತೆರವುಗೊಳಿಸುತ್ತೇವೆ ಎನ್ನುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್. ಎಂ.ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ, ತಾಪಂ ಮಾಜಿ ಅಧ್ಯಕ್ಷ ಕನ್ನೇಗಾಲ ಸ್ವಾಮಿ ಸೇರಿದಂತೆ ಹಲವರು ಇದ್ದರು.

ನಿರಂಜನಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net