ನಕಲಿ ಸೀಲ್​ಗೆ ಹುಡುಕಾಟ

NAGARASABHE
Published on

ಚಿಕ್ಕಮಗಳೂರು: ಕಂದಾಯ ಪಾವತಿಸದೆ ವಂಚಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನಗರಸಭೆ ಎಚ್ಚರಿಕೆ ನೀಡುತ್ತಿತ್ತು. ಆದರೆ ಕಂದಾಯ ಪಾವತಿಸಿದವರಿಗೇ ನಗರಸಭೆ ಸಿಬ್ಬಂದಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬ್ಯಾಂಕ್ ನಕಲಿ ಸೀಲ್ ಬಳಸಿ ಆಸ್ತಿ ತೆರಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆಯಿಂದ ನಗರ ಠಾಣೆಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಬ್ರೋಕರ್ ಮತ್ತು ಬಿಲ್​ಕಲೆಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕಂದಾಯ ಪಾವತಿಯಾಗುತ್ತಿರುವ ಚಲನ್ ಮೇಲೆ ಬ್ಯಾಂಕ್ ನಕಲಿ ಸೀಲ್ ಹಾಕಲಾಗುತ್ತಿದೆ ಎಂದು ಹಲವು ತಿಂಗಳಿಂದಲೂ ದೂರು ಕೇಳಿಬರುತ್ತಿದ್ದರಿಂದ ಪೌರಾಯುಕ್ತ ಬಿ.ಸಿ.ಬಸವರಾಜ್ ತಂಡ ಸೂಕ್ಷ್ಮವಾಗಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆಯಾಗಿರುವುದು ಸ್ಪಷ್ಟವಾಗಿದೆ. ಕೂಡಲೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರ ಅನುಮತಿ ಪಡೆದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಯಪ್ರವೃತ್ತವಾಗಿರುವ ನಗರ ಠಾಣೆ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದು ನಕಲಿ ಸೀಲ್ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

ಬ್ಯಾಂಕ್​ನಲ್ಲಿ ಸೀಲ್​ಗಳು ದುರುಪಯೋಗವಾಗಿಲ್ಲ. ಆದರೆ ಅದೇ ಮಾದರಿಯ ನಕಲಿ ಸೀಲ್ ಮಾಡಿಸಿ ವಂಚನೆ ಮಾಡಿದ್ದಾರೆ. ಬ್ಯಾಂಕ್ ಸೀಲ್​ಗಿಂತ ನೂಲಿನ ಗಾತ್ರ ದೊಡ್ಡದಿರುವ ನಕಲಿ ಸೀಲ್ ಪತ್ತೆಯಾದ ಬಳಿಕ ಸೀಲ್ ಮಾಡಿಸಿದವರು ಯಾರು? ಸೀಲ್ ತಯಾರಾಗಿದ್ದು ಎಲ್ಲಿ? ಬಹಳಷ್ಟು ವಂಚನೆಯಾಗಿರಬಹುದೆಂದು ಶಂಕಿಸಿ ಕಂದಾಯ ಪಾವತಿಯಾಗಿರುವ ನಕಲಿ ರಸೀದಿಗಳ ಬಗ್ಗೆ ನಗರಸಭೆಯಲ್ಲೂ ದಾಖಲೆಗಳ ಹುಡುಕಾಟ ಚುರುಕಾಗಿದೆ. ಎಷ್ಟು ವರ್ಷದಿಂದ ಎಷ್ಟು ಹಣ ವಂಚಕರ ಕೈಸೇರಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಲಿದ್ದು, ಕರ್ತವ್ಯಕ್ಕೆ ಚ್ಯುತಿ ತಂದವರು ಶಿಕ್ಷೆಗೆ ಒಳಗಾಗುವುದು ನಿಶ್ಚಿತ.

ಮಾ.5ರಂದು ಹಣ ಪಾವತಿಸಿದ್ದಕ್ಕೆ ಫೆ.22ರ ರಸೀದಿ: ಕೋಟೆ ಬಡಾವಣೆ ಬ್ಯಾಂಕ್ ಉದ್ಯೋಗಿ ಯೋಗೀಶ್ ಅವರ ಮನೆ ಕಂದಾಯ ಪಾವತಿಸಿದ 10,300 ರೂ. ಮತ್ತು ನೆಹರು ನಗರದ ನಾಸಿರ್ ಉನ್ನೀಸಾ ಅವರು 22 ಸಾವಿರ ರೂ. ಅಭಿವೃದ್ಧಿ ಶುಲ್ಕ ಪಾವತಿಸಿದ ಬ್ಯಾಂಕ್ ನಕಲಿ ಸೀಲ್ ಹೊಂದಿರುವ ಎರಡು ರಸೀದಿಗಳು ಪತ್ತೆಯಾಗಿದ್ದು ಈ ಎರಡೂ ಪ್ರಕರಣಗಳಲ್ಲಿ ಚಲನ್ ಜೆರಾಕ್ಸ್ ಮಾಡಿ ನಕಲಿ ಸಂಖ್ಯೆ ನಮೂದಿಸಿರುವುದು ಬೆಳಕಿಗೆ ಬಂದಿದೆ.

ಕೋಟೆ ಬಡಾವಣೆಯ ಬ್ಯಾಂಕ್ ಉದ್ಯೋಗಿ ಯೋಗೀಶ್ ಅವರು ಆಸ್ತಿ ತೆರಿಗೆ ಪಾವತಿಸಲು 2021ರ ಮಾ.5ರಂದು ನಗರಸಭೆಯಲ್ಲಿ ಬಿಲ್​ಕಲೆಕ್ಟರ್ ಶ್ಯಾಮ್ ಬಳಿ 10,300 ರೂ. ನೀಡಿದ್ದಾರೆ. ಹಣ ಪಡೆದ ಸಿಬ್ಬಂದಿ ಚಲನ್ ಕೊಟ್ಟಿದ್ದಾರೆ. ಕಂದಾಯ ಕಟ್ಟಿದ್ದ ಯೋಗೀಶ್ ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಸೂಕ್ಷ್ಮವಾಗಿ ಚಲನ್ ಪರಿಶೀಲಿಸಿದಾಗ ಹಣ ಪಾವತಿಸಿರುವ ದಿನಾಂಕ ಫೆ.22ರ ಸೀಲ್ ಹಾಕಿದ್ದನ್ನು ಗಮನಿಸಿ ಸಂಶಯಗೊಂಡು ದೂರವಾಣಿ ಮೂಲಕ ಕಂದಾಯ ಅಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ. ದಿನಾಂಕ ತಪ್ಪಾಗಿದೆ ಎಂದು ಬಿಲ್​ಕಲೆಕ್ಟರ್ ಶ್ಯಾಮ್ನ್ನು ವಿಚಾರಿಸಿದಾಗ ಆತ ದಿನಾಂಕ ಸರಿಪಡಿಸಿ ಬೇರೆ ರಸೀದಿ ಹಿಂತಿರುಗಿಸಿದ್ದಾನೆ. ನಂತರ ವಿಷಯ ತಿಳಿದು ಅನುಮಾನಗೊಂಡ ಪೌರಾಯುಕ್ತರು ಶ್ಯಾಮ್ನ್ನು ವಿಚಾರಿಸಿದಾಗ ಬ್ರೋಕರ್ ಕೇಶವ ಅವರ ಕೈಗೆ ಚಲನ್ ಮತ್ತು ಹಣ ನೀಡಿದ್ದೆ. ಅವರು ಬ್ಯಾಂಕ್ ಸೀಲ್ ಹಾಕಿದ ಚಲನ್ ನೀಡಿದರು. ಅಲ್ಲಿ ಮೋಸವಾಗಿರಬಹುದು ಎಂದು ಶ್ಯಾಮ್ ಹೇಳಿಕೆ ನೀಡಿದ್ದಾನೆಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಮಕ್ಕಳ ಗಣತಿ ಸಂದರ್ಭ ಬಳಸಿಕೊಂಡರಾ?: ಪೌರಾಯುಕ್ತರಾಗಿ ಬಿ.ಸಿ.ಬಸವರಾಜು ಅಧಿಕಾರ ವಹಿಸಿಕೊಂಡ ನಂತರ ನಗರಸಭೆಯಲ್ಲಿ ಸಾಕಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ನಗರಸಭೆ ವ್ಯಾಪ್ತಿಯಲ್ಲಿ ಫೆಬ್ರವರಿಯಲ್ಲಿ ತುರ್ತು ಮಕ್ಕಳ ಗಣತಿ ಆರಂಭಿಸಿರುವುದರಿಂದ ಬಹುತೇಕ ಸಿಬ್ಬಂದಿ ಸರ್ವೆಗೆ ತೆರಳಿದಾಗ ಅದನ್ನೇ ಬಳಸಿಕೊಂಡಿರುವ ಬ್ರೋಕರ್​ಗಳು ಕಚೇರಿಗೆ ಆಗಮಿಸಿ ವ್ಯವಹಾರ ಕುದುರಿಸುತ್ತಿದ್ದರು ಎಂಬ ದೂರು ಕೇಳಿಬಂದಿದೆ. ಈ ಪ್ರಕರಣ ದಾಖಲಾದ ನಂತರ ಕಚೇರಿಗೆ ಬ್ರೋಕರ್​ಗಳ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಬ್ರೋಕರ್ ತಂಡ ಹಿಂದೊಮ್ಮೆ ಇದೇ ರೀತಿ ತೆರಿಗೆ ವಂಚನೆ ಮಾಡಿ ಸಿಕ್ಕಿಬಿದ್ದಾಗ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿ ಬಿಟ್ಟಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಖುದ್ದಾಗಿ ಪಾವತಿಸಿ: ತೆರಿಗೆ ವಂಚನೆ ಆರೋಪ ಕುರಿತಂತೆ ಎರಡು ದಿನಗಳಿಂದ ಕಚೇರಿಯಲ್ಲಿ ದಾಖಲೆ ಪರಿಶೀಲಿಸಲಾಗುತ್ತಿದೆ. ಕಚೇರಿಯಲ್ಲಿ ಚಲನ್ ತೆಗೆದುಕೊಂಡವರು ಎಂದು ಬೇಕಾದರೂ ಕಂದಾಯ ಪಾವತಿಸಬಹುದು. ರಸೀದಿಗಳು ರೆಕಾರ್ಡ್ ಆಗಿರುವುದಿಲ್ಲ. ಕೆಲವರು ಸಿಬ್ಬಂದಿ ಅಥವಾ ಬ್ರೋಕರ್​ಗಳಿಗೆ ಹಣ ನೀಡಿ ಕಂದಾಯ ಪಾವತಿಸಿರುತ್ತಾರೆ. ವಂಚಕರು ಬ್ಯಾಂಕ್ ನಕಲಿ ಸೀಲ್ ಬಳಸಿ ಹಣ ಪಾವತಿಸಿರುವ ಚಲನ್​ನ್ನು ಗ್ರಾಹಕರಿಗೆ ನೀಡಿದರೆ ಅವರು ಅದನ್ನು ನಂಬಿರುತ್ತಾರೆ. ಆ ಬಗ್ಗೆ ಕಚೇರಿಯಲ್ಲಿ ಮಾಹಿತಿ ಲಭ್ಯವಾಗುವುದಿಲ್ಲ. ಹಾಗಾಗಿ ಅಭಿವೃದ್ಧಿ ಶುಲ್ಕ, ನೀರು, ಮನೆ, ನಿವೇಶನ, ಕಟ್ಟಡ ಅಥವಾ ಯಾವುದೇ ಕಂದಾಯ ಪಾವತಿಸಿರುವವರು ಚಲನ್​ನೊಂದಿಗೆ ನಗರಸಭೆಯಲ್ಲಿ ಪರಿಶೀಲಿಸಿಕೊಳ್ಳುವುದು ಸೂಕ್ತ. ಜನರು ಖದ್ದಾಗಿ ಬಂದು ಹಣ ಕಟ್ಟಿ ರಸೀದಿ ಪಡೆಯುವುದು ಒಳಿತು ಎಂದು ಪೌರಾಯುಕ್ತ ಬಿ.ಸಿ.ಬಸವರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net