ರಸ್ತೆ ಅಗಲೀಕರಣದಿಂದ ನಾಲ್ಕುಪಟ್ಟು ಹೆಚ್ಚಾಗಲಿದೆ ಆಸ್ತಿ ಬೆಲೆ

nrp 1 (10)
Published on

ಎನ್.ಆರ್.ಪುರ: ರಸ್ತೆ ಅಗಲೀಕರಣದಿಂದ ಪಟ್ಟಣದ ಆಸ್ತಿ ಬೆಲೆ ನಾಲ್ಕು ಪಟ್ಟು ಹೆಚ್ಚಾಗಲಿದ್ದು ರಸ್ತೆ ಅಗಲೀಕರಣಕ್ಕೆ ಎಲ್ಲ ಖಾತೆದಾರರು ಸಹಕಾರ ನೀಡಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮನವಿ ಮಾಡಿದರು.

ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ಸಭಾ ಭವನದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಖಾತೆದಾರರ ಸಮಾಲೋಚನ ಸಭೆಯಲ್ಲಿ ಮಾತನಾಡಿ, ಎನ್.ಆರ್.ಪುರ ಪಟ್ಟಣದಲ್ಲಿ 115 ವರ್ಷಗಳಿಂದ ರಸ್ತೆ ಅಗಲೀಕರಣವಾಗಿಲ್ಲ. ಈಗಿನ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಸರ್ಕಾರದದಿಂದ 60 ಕೋಟಿ ರೂ. ಮಂಜೂರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇನ್ನಷ್ಟು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕಾನೂನು ಬದ್ಧವಾಗಿ ಜಿಲ್ಲಾಡಳಿತ ಪರಿಹಾರ ನೀಡಲಿದೆ. ವರ್ಷದೊಳಗೆ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣವಾಗಬೇಕಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪರಿಹಾರ ನೀಡಿದ ನಂತರವೇ ರಸ್ತೆ ಅಗಲೀಕರಣ ಮಾಡಬೇಕು ಎಂಬುದು ನಮ್ಮ ಆಶಯ. ಸರ್ಕಾರದ ಹಣವು ಗ್ಯಾರಂಟಿ ಯೋಜನೆಗೆ ಹೆಚ್ಚಾಗಿ ಹೋಗುತ್ತಿರುವುದರಿಂದ ಸರ್ಕಾರದ ಅನುದಾನ ಕಡಿಮೆ ಬರುತ್ತಿದೆ. ರಸ್ತೆ ಅಗಲೀಕರಣದ ಸಮಯದಲ್ಲಿ ಖಾತೆದಾರರಿಗೆ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪಪಂ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ,ಉಪಾಧ್ಯಕ್ಷೆ ಉಮಾ ಕೇಶವ್,ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶ್ರೀಧರ್, ಪಪಂ ಮಾಜಿ ಅಧ್ಯಕ್ಷರಾದ ಪಿ.ಆರ್.ಸದಾಶಿವ, ಬಿ.ಎಸ್.ಆಶೀಶ್‌ಕುಮಾರ್, ಎಚ್.ಬಿ.ರಘುವೀರ್, ವಿಜಯಲಕ್ಷ್ಮೀ, ಆರ್.ರಾಜಶೇಖರ್, ಲಕ್ಷ್ಮಣ ಶೆಟ್ಟಿ, ಪಪಂ ಸದಸ್ಯರಾದ ಮುನಾವರ್‌ಪಾಷಾ, ಸುರೈಯಾಭಾನು, ಕುಮಾರ ಸ್ವಾಮಿ, ಮುಕುಂದ, ಸೋಜಾ, ವಸೀಂ, ರೇಖಾ ಮಂಜುನಾಥ್, ರೀನಾ ಮೋಹನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net