

ಹುಬ್ಬಳ್ಳಿ: ಇಲ್ಲಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ ಬಳಿಯ ರಾಯ್ಕರ್ ಮೈದಾನದಲ್ಲಿ ವಿಜಯವಾಣಿ ಆಯೋಜಿಸಿರುವ "ರಿಯಲ್ ಎಸ್ಟೇಟ್ ಆ್ಯಂಡ್ ಇಂಟೀರಿಯರ್ಸ್ ಎಕ್ಸ್ ಪೋಕ್ಕೆ ಶುಕ್ರವಾರ ಬೆಳಗ್ಗೆ ಅದ್ದೂರಿ ಚಾಲನೆ ನೀಡಲಾಯಿತು.
ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಾ ಸಂಕೇಶ್ವರ ಅವರು ಎಕ್ಸ್ ಪೋ ಉದ್ಘಾಟಿಸಿದರು. ಸ್ಕೈ ಟೌನ್ ಗ್ರುಪ್ ಎಂಡಿ ಚೇತನ ಪವಾರ, ಮ್ಯಾನೇಜಿಂಗ್ ಪಾರ್ಟನರ್ ಸಾಯಿಪ್ರಸಾದ ಕಲಬುರ್ಗಿ, ಶ್ರೀದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ, ಸ್ವರ್ಣ ಗ್ರುಪ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಶ್ರೀದತ್ತ ಇನ್ಪ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಎಂಡಿ ಪ್ರಕಾಶ ಜೋಶಿ ಹಾಗೂ ಇತರರು ಇದ್ದರು.
ಶಿವಾ ಸಂಕೇಶ್ವರ ಹಾಗೂ ಇತರ ಗಣ್ಯರು ಎಕ್ಸ್ ಪೋದಲ್ಲಿ ಇರುವ 40ಕ್ಕೂ ಹೆಚ್ಚು ಮಳಿಗೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದರು. ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾದ ನಿವೇಶನ, ಅಪಾರ್ಟ್ಮೆಂಟ್ ಗಳು, ಬ್ಯಾಂಕ್ ಗಳು ನೀಡುವ ಸಾಲ ಸೌಲಭ್ಯ ಹಾಗೂ ಇತರ ಮಾಹಿತಿ ಪಡೆದುಕೊಂಡರು.
ಬೆಳಗ್ಗೆ 9 ಗಂಟೆಯಿಂದಲೇ ಜನರು ಎಕ್ಸ್ಪೋಕ್ಕೆ ಭೇಟಿ ನೀಡಲು ಆರಂಭಿಸಿದರು. ಸಂಜೆ 8 ಗಂಟೆಯವರೆಗೂ ನಿರಂತರವಾಗಿ ಸಾರ್ವಜನಿಕರು ವೀಕ್ಷಣೆ ಮಾಡಿದರು. ಮೇ 5ರವರೆಗೆ ನಡೆಯಲಿರುವ ಎಕ್ಸ್ಪೋಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಯಿತು.
ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮೇಯರ್ ವೀಣಾ ಬರದ್ವಾಡ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ ಹಾಗೂ ಮತ್ತಿತರ ಗಣ್ಯರು ಎಕ್ಸ್ಪೋಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಹವಾನಿಯಂತ್ರಿತ ಟೆಂಟ್:
ಸಂಪೂರ್ಣ ಹವಾನಿಯಂತ್ರಿತ ಟೆಂಟ್ ಅಡಿಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಲಾಗಿದ್ದು, ಬಿಲ್ಡರ್ಸ್, ಡೆವಲಪರ್ಸ್, ಫಾರ್ಮಲ್ಯಾಂಡ್ ನಿರ್ಮಾಪಕರು, ಬ್ಯಾಂಕ್, ಸ್ಟೀಲ್, ಸಿಮೆಂಟ್, ಗೃಹಾಲಂಕಾರ ಸೇರಿ ವಿವಿಧ ಮಳಿಗೆಗಳು ಜನಮನ ಸೆಳೆಯುತ್ತಿವೆ. ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ.
ಬಿಲ್ಡರ್ಗಳು ತಾವು ಅಭಿವೃದ್ಧಿ ಪಡಿಸಿದ ವಿವಿಧ ವಸತಿ ಯೋಜನೆ, ಅಪಾರ್ಟಮೆಂಟ್, ವಿಲ್ಲಾಗಳನ್ನು ಒಳಗೊಂಡ ಪ್ರೊಜೆಕ್ಟ್ಗಳನ್ನು ಎಕ್ಸ್ಪೋದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಒಂದೇ ಸೂರಿನಡಿ ತರಲಾಗಿದ್ದು, ಮನೆ, ಸೈಟ್ಗಳನ್ನು ಕೊಳ್ಳುವವರು ಹತ್ತಾರು ಯೋಜನೆಗಳನ್ನು ವೀಕ್ಷಣೆ ಮಾಡಿ ತಮಗಿಷ್ಟವಾದ ಕಡೆ ಬುಕ್ ಮಾಡಿಕೊಳ್ಳುತ್ತಿದ್ದಾರೆ.
ಉರಿಬಿಸಿಲಿನಲ್ಲೂ ಹವಾನಿಯಂತ್ರಿತ ಟೆಂಟ್ ಒಳಗಡೆ ಹೋಗುತ್ತಲೇ ತಂಪು ವಾತಾವರಣ ನೋಡುಗರಿಗೆ ಸಹನೀಯ ಎನಿಸುತ್ತಿದೆ. ಹಾಗಾಗಿ, ವೀಕ್ಷಣೆಗೆ ಬಂದ ಗ್ರಾಹಕರು ಕೆಲಹೊತ್ತು ಮಳಿಗೆಗಳಲ್ಲಿ ಕಳೆದು ಯೋಜನೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಪ್ರತಿ ವರ್ಷ ಪ್ರಾಪರ್ಟಿ ಎಕ್ಸ್ ಪೋ ಅನ್ನು ಆಯೋಜಿಸುತ್ತ ಬಂದಿದ್ದೇವೆ. ಬಿಲ್ಡರ್ ಗಳು, ಡೆವಲಪರ್ಸ್, ಬ್ಯಾಂಕರ್ ಗಳು ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರವು ಬೆಂಗಳೂರಿನ ಹಾಗೆ ವೇಗವಾಗಿ ಬೆಳೆಯುತ್ತಿದೆ. ನಿವೇಶನ, ಅಪಾರ್ಟ್ಮೆಂಟ್ ಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಅವಳಿ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹೆಚ್ಚುತ್ತಿರುವುದರಿಂದ ಇಲ್ಲಿ ಮನೆಗಳನ್ನು ಪಡೆಯಬೇಕು ಎಂಬುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೆಲ್ಲ ಗಮನಿಸಿ, ಒಂದೇ ವೇದಿಕೆಯಡಿ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ. -ಶಿವಾ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ವಿಜಯಾನಂದ ಟ್ರಾವಲ್ಸ್ ಪ್ರೈವೇಟ್ ಲಿಮಿಟೆಡ್