ಆಸ್ತಿ ವಿವಾದ ಪ್ರಕೋಪಕ್ಕೆ ತಿರುಗಿ ಹಿಂಸಾಚಾರ, 25 ಜನರಿಗೆ ಗಾಯ

8KHANAPUR1.jpg
Published on

ಖಾನಾಪುರ: ಗ್ರಾಮದೇವತೆ ದೇವಸ್ಥಾನಕ್ಕೆ ಸೇರಿದ ಕೃಷಿ ಭೂಮಿ ಬಳಕೆ ಮಾಡುವ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳಲ್ಲಿ ಭುಗಿಲೆದ್ದ ಆಸ್ತಿ ವಿವಾದ ಪ್ರಕೋಪಕ್ಕೆ ತಿರುಗಿ ಉಂಟಾದ ಹಿಂಸಾಚಾರದಲ್ಲಿ ಗ್ರಾಮದ 20 ನಾಗರಿಕರು ಗಾಯಗೊಂಡ ಘಟನೆ ತಾಲೂಕಿನ ಜಾಂಬೋಟಿ ಹೋಬಳಿಯ ಚಿಗುಳೆ ಗ್ರಾಮದಲ್ಲಿ ಗುರುವಾರ ನಡದಿದೆ.
 ಜಮೀನಿನ ಉಪಭೋಗ ಕುರಿತು ಗ್ರಾಮದ ಎರಡು ಪಂಗಡಗಳಲ್ಲಿ ಶುರುವಾದ ವಾದ-ವಿವಾದಗಳಲ್ಲಿ 5 ಮಹಿಳೆಯರು ಸೇರಿ 25 ಜನರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಚಿಗುಳೆ ಗ್ರಾಮದೇವತೆ ಮಾವುಲಿ ದೇವಿ ದೇವಸ್ಥಾನದ ಕೃಷಿ ಭೂಮಿಯನ್ನು ಗ್ರಾಮದ ಒಂದು ಪಂಗಡಕ್ಕೆ ಸೇರಿದವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಈ ಜಮೀನನ್ನು ತಮಗೂ ಕೃಷಿ ಕಾರ್ಯಕ್ಕೆ ನೀಡುವಂತೆ ಗ್ರಾಮದ ಇನ್ನೊಂದು ಪಂಗಡ ಹಿರಿಯರನ್ನು ಆಗ್ರಹಿಸಿತ್ತು. ಗುರುವಾರ ವಿವಾದಿತ ಜಮೀನಿನಲ್ಲಿ ಗ್ರಾಮದ ಶಿವಾಜಿ ಚೌಗುಲೆ ಎಂಬಾತ ತನ್ನ ದನಗಳನ್ನು ಮೇಯಲು ಬಿಟ್ಟಿದ್ದನ್ನು ಗಮನಿಸಿದ ಗ್ರಾಮದ ಅನಂತ ಗಾವಡೆ, ವಾಸುದೇವ ಚೌಗುಲೆ ಹಾಗೂ ಇತರರು ಶಿವಾಜಿಗೆ ದನಕರುಗಳನ್ನು ಹೊಲದಲ್ಲಿ ಬಿಡದಂತೆ ಸೂಚಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಒಂದು ಪಂಗಡದ 20ಕ್ಕೂ ಹೆಚ್ಚು ಜನರ ತಂಡ ಶಿವಾಜಿ ಮನೆಗೆ ತೆರಳಿ ಶಿವಾಜಿ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದೆ. ಈ ವಿಷಯ ಶಿವಾಜಿ ಕುಟುಂಬದ ಇತರರಿಗೆ ತಿಳಿದು, ಅವರು ಇನ್ನೊಂದು ಗುಂಪಿನವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಉದ್ರೇಕಗೊಂಡ ಎರಡೂ ಗುಂಪಿನವರು ಕೈ-ಕೈ ಮಿಲಾಯಿಸಿದ್ದಾರೆ. ಒಂದು ಗುಂಪಿನವರು ಇನ್ನೊಂದು ಗುಂಪಿನ ಮೇಲೆ ಕಾರದಪುಡಿ ಎರಚಿ ದಾಳಿ ನಡೆಸಿದ್ದಾರೆ. ಎರಡೂ ಗುಂಪಿನವರ ನಡುವೆ ನಡೆದ ಹೊಡೆದಾಟದಲ್ಲಿ ಚೌಗುಲೆ ಕುಟುಂಬದ 6 ಜನ ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾವಡೆ ಕುಟುಂಬದ 12ಕ್ಕೂ ಹೆಚ್ಚು ಜನರು ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಗುಂಪಿನವರಿಂದ ದೂರು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net