ಸರ್ಕಾರಿ ನೌಕರರ ಆಸ್ತಿ ವಿವರ ಲೋಕಾಯುಕ್ತಕ್ಕೆ ಲಭ್ಯವಾಗಲಿ

web 1
Published on

ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುಧಾಕರ್ ಒತ್ತಾಯ 26ಕ್ಕೆ ಬೆಳಗಾವಿಯಲ್ಲಿ ಯುವಕರ ಹಕ್ಕೊತ್ತಾಯ ಸಮಾವೇಶ

 ರಾಮನಗರ : ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತೆ ಜಿಲ್ಲಾಡಳಿತ ವ್ಯವಸ್ಥೆ ರೂಪಿಸಬೇಕು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುಧಾಕರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿನ ಇಲಾಖಾ ಅಧಿಕಾರಿಗಳು ಅವರ ಅಧೀನ ಅಧಿಕಾರಿಗಳ ಹಾಗೂ ನೌಕರರ ಆಸ್ತಿ ವಿವರಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕರ್ನಾಟಕ ಲೋಕಾಯುಕ್ತ ಪರಿಹಾರ ಸೂಚಿಸಿದ್ದಾರೆ. ಈ ಪ್ರಕಾರ ಎಲ್ಲ ಸರ್ಕಾರಿ ನೌಕರರ ಆಸ್ತಿ ವಿವರವನ್ನು ಕಡ್ಡಾಯವಾಗಿ ಪ್ರತಿ ವರ್ಷ ಸಂಗ್ರಹಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ವಿವರಗಳು ನಿರಂತರವಾಗಿ ಲೋಕಾಯುಕ್ತ ಸಂಸ್ಥೆಗೆ ಮುಕ್ತವಾಗಿ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸಬೇಕೆಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದರು. ಅದು ಪಾಲನೆಯಾಗುತ್ತಿಲ್ಲ. ಸರ್ಕಾರಿ ನೌಕರರು ಸಲ್ಲಿಸುತ್ತಿರುವ ವಿವರವೂ ನೈಜವಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳುವ ಪ್ರಕ್ರಿಯೆ ರಾಜ್ಯ ಸರ್ಕಾರದ ಬಳಿ ಇಲ್ಲ ಎಂದು ಹೇಳಿದರು.

ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಉದ್ಯೋಕ್ಕಾಗಿ ಕನ್ನಡಿಗರು ಎಂಬ ಹೆಸರಿನಡಿ ಯುವಕರ ಹಕ್ಕೊತ್ತಾಯ ಸಮಾವೇಶವನ್ನು ಜ.26ರಂದು ಆಯೋಜಿಸಲಾಗಿದೆ. ದೇಶದ ಯುವ ಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕರ್ನಾಟದಲ್ಲಿ ಮತ್ತಷ್ಟು ವ್ಯಾಪಕವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಲಕ್ಷಾಂತರ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿದೆ. ಇನ್ನೊಂದೆಡೆ ರಾಜ್ಯದಲ್ಲಿ ಸ್ಥಾಪನೆಯಾಗುವ ಮತ್ತು ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳಲ್ಲಿ ಕೂಡ ನಿರಂತರವಾಗಿ ರಾಜ್ಯದ ಯುವ ಜನರು ಕಡೆಗಣಿಸಲ್ಪಡುತ್ತಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ಹಿಂದಿ ಹೇರಿಕೆಯಿಂದ ಕೇಂದ್ರ ಸರ್ಕಾರಿ ನೌಕರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net