ನರೇಗಾ ಯೋಜನೆಯನ್ನು ಸಮರ್ಪಕ ಅನುಷ್ಠಾನ ಮಾಡಿ

ಕುರುಗೋಡು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ತಾಲೂಕು ಆಡಳಿತ ಅಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಮಾತನಾಡಿದರು. ತಾಪಂ ಇಒ ನಿರ್ಮಾಲಾ, ನರೇಗಾ ಎಡಿ ಶಿವರಾಮರೆಡ್ಡಿ, ಪ್ರಭಾರೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಇದ್ದರು.
ಕುರುಗೋಡು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ತಾಲೂಕು ಆಡಳಿತ ಅಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಮಾತನಾಡಿದರು. ತಾಪಂ ಇಒ ನಿರ್ಮಾಲಾ, ನರೇಗಾ ಎಡಿ ಶಿವರಾಮರೆಡ್ಡಿ, ಪ್ರಭಾರೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್ ಇದ್ದರು.
Published on

ಕುರುಗೋಡು: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ಆದಷ್ಟು ಬೇಗ ವಿತರಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಲೂಕು ಆಡಳಿತ ಅಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕೇವಲ ಏಳು ಹಾಲು ಉತ್ಪಾದಕ ಸಂಘ ರಚನೆ ಮಾಡಲಾಗಿದೆ. ವರ್ಷಕ್ಕೆ ಒಂದೇ ಸಂಘ ರಚಿಸಿದರೆ ಹೇಗೆ?. ಇದರಿಂದ ಕೆಎಂಎಫ್‌ನಿಂದ ಹಾಲು ಉತ್ಪಾದನೆ ಕುಂಠಿತವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಪಶು ವೈದ್ಯಾಧಿಕಾರಿ ಸಂದೀಪ್ ಪ್ರತಿಕ್ರಿಯಿಸಿ, ರೈತರ ರಾಸುವಿನ ಹಾಲಿನಲ್ಲಿ ಕೊಬ್ಬಿನಾಂಶ ಕೊರತೆ ಇದೆ. ಆದ್ದರಿಂದ ರೈತರು ಕೆಎಂಫ್‌ಗೆ ಹಾಲು ಹಾಕುತ್ತಿಲ್ಲ. ಜತೆಗೆ ಸಂಘ ರಚನೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಮಂಜುನಾಥ ಜವಳಿ ಮಾತನಾಡಿ, ಇತ್ತೀಚೆಗೆ ಕುರುಗೋಡು, ಗೆಣಿಕೆಹಾಳ ಸೇರಿ ಇತರೆ ಗ್ರಾಮಗಳಲ್ಲಿ ವೈರಲ್ ಜ್ವರ ಹರಡಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜ್ವರದ ಪ್ರತಿರೋಧಕ ಔಷಧ ಕೊರತೆ ಉಂಟಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಥೈರಾಯ್ಡ ಪರೀಕ್ಷೆ ಪರಿಕರ ಇಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ 700 ರೂ. ವ್ಯಯ ಮಾಡಬೇಕಿದೆ. ಆದ್ದರಿಂದ ಅನುದಾನ ನೀಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಅಧಿಕಾರಿ ವಾಗೀಶ್ ಶಿವಾಚಾರ್ಯ ಪ್ರತಿಕ್ರಿಯಿಸಿ, ಜಿಪಂ ಅನುದಾನ ನೀಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಈ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಡಿಪಿಒ ಮೋಹನಾ ಕುಮಾರಿ ಮಾತನಾಡಿ, ಮಾರುತಿ ಕ್ಯಾಂಪ್, ಸಿಂಧಿಗೇರಿ ಕೇಂದ್ರ ಸಿದ್ದಮ್ಮನಹಳ್ಳಿ ಸೇರಿ ಏಳು ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಂಬಂಧಿಸಿದ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಕೋರಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗರ್ಜಪ್ಪ ಮಾತನಾಡಿ, ತಾಲೂಕಿನಲ್ಲಿ ನಿರೀಕ್ಷೆಗೆ ಮೀರಿ 210 ಎಂಎಂ ಮಳೆಯಾಗಿದೆ. ವಿವಿಧ ಯೋಜನೆಯಡಿ ದಾಳಿಂಬೆ, ಅಂಜೂರ ಡ್ರಾೃಗನ್ ಫ್ರೂಟ್ ವಿಸ್ತರಿಸಲಾಗುವುದು. ಭತ್ತದ ಬಿತ್ತನೆ ಬೀಜದಲ್ಲಿ ದುಂಡಾಣು, ಮೆಕ್ಕೆಜೋಳದಲ್ಲಿ ಸೈನಿಕ ಹುಳು, ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ಉಪಟಳದ ಬಗ್ಗೆ ರೈತರ ಜಮೀನಿಗೆ ಭೇಟಿ ನೀಡಿ ನಿಯಂತ್ರಣದ ಕುರಿತು ಮಾಹಿತಿ ನೀಡಲಾಗಿದೆ. ತಾಲೂಕಿನಲ್ಲಿ ಯೂರಿಯಾ ಕೊರತೆ ಕಾಡದಂತೆ ಹಂತ ಹಂತವಾಗಿ ಸೊಸೈಟಿಯಿಂದ ರೈತರಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಇಲಾಖೆ ವ್ಯವಸ್ಥಾಪಕ ಭುಜಂಗಯ್ಯ ಮಾತನಾಡಿ, ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡಲಾಗಿದೆ. ಶೂ ಮತ್ತು ಸಾಕ್ಸ್ ಸದ್ಯದಲ್ಲಿ ನೀಡಲಾಗುವುದು ಎಂದು ತಿಳಿಸಿದರು. ತಾಪಂ ಇಒ ನಿರ್ಮಾಲಾ, ನರೇಗಾ ಎಡಿ ಶಿವರಾಮರೆಡ್ಡಿ, ಪ್ರಭಾರೆ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net