ಬಿತ್ತನೆಗೂ ಮೊದಲು ಬೇಕು ಸೂಕ್ತ ಬೀಜೋಪಚಾರ, ಕೃಷಿ ಇಲಾಖೆ ಸಲಹೆ

20-1.jpg
Published on

ಚಿಕ್ಕಬಳ್ಳಾಪುರ: ಮುಂಗಾರು ಮಳೆಯ ಅವಧಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿರುವುದರ ನಡುವೆ ಮೊದಲ ಹಂತವಾಗಿ ಬಿತ್ತನೆ ಬೀಜೋಪಚಾರಕ್ಕೆ ಆದ್ಯತೆ ನೀಡಬೇಕಾಗಿದ್ದು ಇಲ್ಲದಿದ್ದಲ್ಲಿ ಇಳುವರಿಯಲ್ಲಿ ಗುಣಮಟ್ಟ ಕುಸಿಯಲಿದೆ.  
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ಬೆಳೆಗಳನ್ನು ಹೆಚ್ಚಿಗೆ ಬೆಳೆಯಲಾಗುತ್ತದೆ. ಇದರ ನಡುವೆ ಮಳೆ, ಹವಾಮಾನ ವೈಪರೀತ್ಯದ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಮುಸುಕಿನ ಜೋಳ, ನೆಲಗಡಲೆ ಹಾಗೂ ತೊಗರಿ ಬೆಳೆಗಳಲ್ಲಿ ಬೆಳವಣಿಗೆ ಹಂತದಲ್ಲಿ ಕೆಲವು ರೋಗಗಳು ಕಾಣಿಸಿಕೊಳ್ಳುತ್ತಿದ್ದು ಇದನ್ನು ಪ್ರಾರಂಭದ ಹಂತದಲ್ಲಿ ನಿಯಂತ್ರಿಸಬೇಕು. ಒಂದು ವೇಳೆ ಅಸಡ್ಡೆ ತೋರಿದರೆ ರೈತರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಬಿತ್ತನೆಗೆ ಮೊದಲೇ ವೈಜ್ಞಾನಿಕ ರೀತಿಯಲ್ಲಿ ಬೀಜೋಪಚಾರ ಕೈಗೊಳ್ಳಬೇಕು. ಇದರ ಮೂಲಕ ಮಣ್ಣು ಹಾಗೂ ಬಿತ್ತನೆ ಬೀಜದಿಂದ ಹರಡುವ ರೋಗಗಳನ್ನು ತಡೆಯಬಹುದಾಗಿದೆ.
ಒಳ್ಳೆಯ ಬೆಳೆಯ ಗುಣಮಟ್ಟದ ಇಳುವರಿಯನ್ನು ಕಾಣುವಲ್ಲಿ ಎಲ್ಲದಕ್ಕೂ ಕೃಷಿಯಲ್ಲಿ ಬಿತ್ತನೆ ಬೀಜದ ಆಯ್ಕೆಯೇ ಪ್ರಮುಖವಾದುದು. ನಕಲಿ, ಕಳಪೆ ಉತ್ಪನ್ನವನ್ನು ಬಳಸಬಾರದು. ಅಧಿಕೃತ ಸಂಸ್ಥೆಗಳಿAದ ಉತ್ತಮವಾದುದನ್ನು ಖರೀದಿಸಬೇಕು. ಇದರ ಅರಿವಿದ್ದರೂ ಕೆಲವರು ಅನೇಕ ಬಾರಿ ಮನೆಯಲ್ಲಿ ಸಂಗ್ರಹಿಸಿಟ್ಟ ಗುಣಮಟ್ಟದವಿಲ್ಲದ ಬಿತ್ತನೆ ಬೀಜ ಬಳಸಿ ನಷ್ಟ ಅನುಭವಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಬಿತ್ತನೆ ಬೀಜ ಬಳಸುವಾಗ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳ ಹತೋಟಿ, ಬೀಜದ ಮೊಳಕೆ ಪ್ರಮಾಣವನ್ನು ಹೆಚ್ಚಿಸಲು, ಜೈವಿಕ ಗೊಬ್ಬರಗಳ ಮೂಲಕ ವಾತಾವರಣದಲ್ಲಿರುವ ಪೋಷಕಾಂಶಗಳನ್ನು ಸ್ವೀಕರಿಸಿ ಬೆಳೆಗಳಿಗೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಬೀಜೋಪಚಾರವು ಪ್ರಮುಖ ಪಾತ್ರ ವಹಿಸುತ್ತದೆ.
ಸಮರ್ಪಕ ಬೀಜೋಪಚಾರದಿಂದ ಬೀಜಗಳ ಮೊಳಕೆಯ ಪ್ರಮಾಣ ಹೆಚ್ಚಳ, ಸಸಿಗಳ ಸಂಖ್ಯೆ ವೃದ್ಧಿ, ಮಣ್ಣು ಮತ್ತು ಬೀಜಗಳ ಮೂಲಕ ಹರಡುವ ರೋಗ ಹಾಗೂ ಕೀಟಗಳನ್ನು ನಿಯಂತ್ರಣ, ಜೈವಿಕ ಗೊಬ್ಬರಗಳಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜನಕ/ರಂಜಕವನ್ನು ಸ್ಥಿರೀಕರಿಸಿ ಬೆಳೆಗಳಿಗೆ ಪೂರೈಕೆ, ಬೇಸಾಯದ ಖರ್ಚು ಹಾಗೂ ಶೇ.೨೦-೨೫ ರಸಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಸೇರಿದಂತೆ ನಾನಾ ಅನುಕೂಲಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net