ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದಿಂದ ಪ್ರಚಾರಾಂದೋಲನ

17
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತ ಹಾಗೂ ಕಾರ್ಮಿಕ, ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದಿಂದ ನಗರದ ಗಾಂಧಿವೃತ್ತದಲ್ಲಿ ಮಂಗಳವಾರ ಪ್ರಚಾರಾಂದೋಲನ ನಡೆಸಲಾಯಿತು.
ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಜಾತ್ಯತೀತ, ಸೌಹಾರ್ದ, ಬಹುತ್ವದ ಭಾರತವನ್ನು ನಾಶ ಮಾಡಿದ್ದೇ ಮೋದಿ ಅವರ 10 ವರ್ಷದ ಸಾಧನೆ. ನಮ್ಮ ದೇಶದ ಸಂಪತ್ತು ಇಂದು ನಮ್ಮದಲ್ಲ. ಅವೆಲ್ಲವನ್ನೂ ಅವರ ಇಬ್ಬರು ಸ್ನೇಹಿತರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿದರು.
ಜನಪರವಾಗಿ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು, ವಿವಿಧ ವೇಷ ಹಾಕಿಕೊಂಡು ನಟನೆಯಲ್ಲಿ ಮುಳುಗಿದ್ದಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ನಾವು ತಿನ್ನಲ್ಲ, ತಿನ್ನುವುದಕ್ಕೆ ಬಿಡುವುದಿಲ್ಲ ಎಂದು ಹೇಳಿ ಕೋಟ್ಯಧಿಪತಿಗಳ ಸಾಲ ಮನ್ನಾ ಮಾಡಿ ದೇಶ ಬಿಟ್ಟು ಓಡಿ ಹೋಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಇಂತಹ ಸಂದರ್ಭದಲ್ಲಿ ಇವರಿಂದ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸೋಲಿಸಿ ದೇಶವನ್ನು ರಕ್ಷಿಸಬೇಕಿದೆ ಎಂದರು.
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕೇಂದ್ರ ಸರ್ಕಾರದ ವಿಕಸಿತ ಭಾರತ ಎನ್ನುವ ಸುಳ್ಳು ಪ್ರಚಾರದಲ್ಲಿ ಮುಳುಗಿದೆ. ಆದರೆ ಅವರ ವಿಕಸಿತ ಭಾರತದಲ್ಲಿ 2 ಕೋಟಿ ಎಲ್ಲಿದೆ ? ಬೆಲೆ ಏರಿಕೆ ನಿಯಂತ್ರಣ ಎಲ್ಲಿದೆ? ರೈತರ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗದಿ ಮಾಡುವ ಕಾನೂನು ಮಾಡಲು ಸಾಧ್ಯವಾಗದಿರುವಾಗ ವಿಕಸಿತ ಭಾರತ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಒಂದು ದೇಶ ಒಂದು ತೆರಿಗೆ ಎಂದು ಹೇಳಿ ಎಲ್ಲದಕ್ಕೂ ತೆರಿಗೆ ವಿಧಿಸಿ ಈಗ ನಮ್ಮ ತೆರಿಗೆ ಪಾಲನ್ನು ನೀಡದೆ ಸೇಡಿನ ರಾಜಕಾರಣ ಮಾಡುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಪ್ರಚಾರಾಂದೋಲನ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್, ಲ.ಜಗನ್ನಾಥ್, ಜಿ.ಜಯರಾಂ, ಎನ್.ವಿಜಯ್‌ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಜಿ.ರಾಜೇಂದ್ರ, ಸದಸ್ಯರಾದ ಸುಬ್ರಹ್ಮಣ್ಯ, ಬಾಲಾಜಿ, ಬಲರಾಂ, ಕೃಷ್ಣಪ್ಪ, ರಾಘವೇಂದ್ರ, ವರುಣ ನಾಗರಾಜ್, ಶಶಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net