ತ್ವರಿತ ಬಾಕಿ ಪಾವತಿಸಲು ಕ್ರಮ

Prompt payment of dues
ಮುಧೋಳ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ರೈತ ಹಾಗೂ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರಿಗೆ ರೈತ ಮುಖಂಡ ಬಸವಂತಪ್ಪ ಕಾಂಬಳೆ, ಸುಭಾಷ ಶಿರಬೂರ ಮನವಿ ಸಲ್ಲಿಸಿದರು.
Published on

ಮುಧೋಳ: ಈಗಾಗಲೇ ಜಿಲ್ಲೆಯ ಹನ್ನೆರಡು ಸಕ್ಕರೆ ಕಾರ್ಖಾನೆಯವರು ಎಫ್‌ಆರ್‌ಪಿ ಪ್ರಕಾರ ಶೇ. 100ರಷ್ಟು ಹಣವನ್ನು ರೈತರಿಗೆ ಪಾವತಿ ಮಾಡಿದ್ದು, ಕೇವಲ ಜಮಖಂಡಿ ಶುಗರ್ ಮಾತ್ರ ಇನ್ನೂ 18.50 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ತ್ವರಿತವಾಗಿ ಬಾಕಿ ಪಾವತಿಸಲು ಕ್ರಮವಹಿಸಲು ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿ, ಹೈಕೋರ್ಟ್‌ನಲ್ಲಿ ಸ್ಟೇ ಇರುವ ಕಾರಣ ಸಕ್ಕರೆ ಆಯುಕ್ತರು ಬೆಂಗಳೂರು ಹಾಗೂ ಅಡ್ವೋಕೇಟ್ ಜನರಲ್ ಅವರಿಗೂ ವಿನಂತಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ರೈತರ ಕಬ್ಬಿನ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅಂಶಗಳನ್ನು ಆಲಿಸಲಾಗಿದೆ. ತಮ್ಮ ಪರವಾಗಿ ನಾವು ಕಾನೂನು ಸುವ್ಯವಸ್ಥಿತ ಕಾಪಾಡಲು ನಮ್ಮ ಇಲಾಖೆ ಸದಾ ಸಿದ್ಧರಿದ್ದು, ಜಿಲ್ಲಾಡಳಿತ ಜೊತೆಗೆ ತಮ್ಮ. ಬೇಡಿಕೆ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಇದಕ್ಕೂ ಮೊದಲು ಉಪಸ್ಥಿತ ರೈತರು ತಮ್ಮ ನೋವನ್ನು ತೋಡಿಕೊಂಡು, ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿದ್ದು ಪ್ರಸಕ್ತ ವರ್ಷ 13 ಕಾರ್ಖಾನೆಗಳು 1,52,37,243 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಕಬ್ಬು ನಿಯಂತ್ರಣ ಆದೇಶ 1966 ರ ಪ್ರಕಾರ ಕಬ್ಬು ಕಳುಹಿಸಿದ ರೈತರಿಗೆ 14 ದಿನದೊಳಗೆ ಮೊತ್ತ ಪಾವತಿಸಬೇಕು. ಆದರೆ ಕೆಲ ಕಾರ್ಖಾನೆಗಳು ಕಾರ್ಖಾನೆಗಳು ಬಂದ್ ಆಗಿ 4-5 ತಿಂಗಳು ಆದರೂ ಪೂರ್ಣ ಪ್ರಮಾಣದಲ್ಲಿ ಬಾಕಿ ಪಾವತಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆಗಳು ರಿಕವರಿ ದರ ಆಧರಿಸಿ ಎಫ್‌ಆರ್‌ಪಿ ದರ ನಿಗದಿಪಡಿಸುತ್ತವೆ. ಕಬ್ಬು ಕಟಾವು, ಸಾಕಾಣಿಕೆ ವೆಚ್ಚವೆಂದು ಕಡಿತಗೊಳಿಸುತ್ತದೆ. ಜೊತೆಗೆ ವೇಬ್ರಿಜ್‌ನಲ್ಲಿ ಮೋಸ, ಅನವಶ್ಯಕ ಲಗಾಣಿ ವಸೂಲಿ ಮಾಡುತ್ತಿದೆ. ಹೀಗಾಗಿ ಸರ್ಕಾರದ ಮೂಲಕ ವೇಬ್ರಿಜ್ ಸ್ಥಾಪನೆ ಮಾಡಬೇಕು. ರೈತರಿಗೆ ಕಬ್ಬಿನ ಮೊತ್ತವನ್ನು ವಿಳಂಬವಾಗಿ ಪಾವತಿಸಿದರೆ ಅದಕ್ಕೆ ಕಾರ್ಖಾನೆಯವರು ಬಡ್ಡಿ ಹಾಕಿ ಕೊಡಬೇಕು ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಕ್ಕರೆ ಸಚಿವರು ಹಾಗೂ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಸಭೆಯನ್ನು ಆಯೋಜಿಸಿ ಚರ್ಚಿಸಬೇಕು, ಮುಂಬರುವ ಹಂಗಾಮಿನೊಳಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕಳಪೆ ಗೊಬ್ಬರ ಬೀಜ ವಿತರಣೆ ಹಾಗೂ ಅನಧಿಕೃತವಾಗಿ ಸಂಗ್ರಹಮಾಡಿ ಹೆಚ್ಚಿನ ದರದಲ್ಲಿ ಬೀಜ ಗೊಬ್ಬರ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ, ಜಿಲ್ಲಾಧಿಕಾರಿ ಸಂಗಪ್ಪ ಎಂ., ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ರೈತ ಮುಖಂಡ ಬಸವಂತಪ್ಪ ಕಾಂಬಳೆ, ಸುಭಾಷ ಶಿರಬೂರ, ಜಿಲ್ಲಾಧಿಕಾರಿ ಸಂಗಪ್ಪ ಎಂ. ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಮಹದೇವ ಸನಮುರಿ, ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಸುಭಾಷ ಶಿಬರೂರು, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ ಎ.ಜಿ. ಪಾಟೀಲ, ರಮೇಶ ಸಾಳುಂಕೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net