

ಆರ್ಡಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಗ್ರಾಮದ ಅಲ್ಬಾಡಿ-ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಇಲ್ಲಿನ ಶಾಲೆಯ ಶಿಕ್ಷಕರ ಸಹಕಾರದಿಂದ ಏಳು ವಿದ್ಯಾರ್ಥಿಗಳು ತಂಡ ಮಾಡಿದ ಪ್ರೊಮೋಶನಲ್ ವಿಡಿಯೋವನ್ನು ಎಂಎಚ್‌ಆರ್‌ಡಿ ಶಿಕ್ಷಣ ಸಚಿವಾಲಯದ ನಿರ್ದೇಶಕರು ಗುರುತಿಸಿ ಪ್ರಶಂಸಿದ್ದಾರೆ.
ಈ ಪ್ರಮೋಶನಲ್ ವೀಡಿಯೋ ದೂರದರ್ಶನದ ಡಿಡಿ ನ್ಯೂಸ್, ಡಿಡಿ ಇಂಡಿಯಾ ಹಾಗೂ ಇತರ ರಾಷ್ಟ್ರಮಟ್ಟದ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಒಟ್ಟು ಎರಡು ನಿಮಿಷ ಐವತ್ತೆರಡು ಸೆಕುಂಡ್‌ಗಳ ವೀಡಿಯೋವನ್ನು ಮುಖ್ಯಶಿಕ್ಷಕ ಶೇಖರ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸಾಬ್ರಕಟ್ಟೆ ನಿರ್ದೇಶನದಲ್ಲಿ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಮೊಬೈಲ್ ಮತ್ತು ಗೂಗಲ್ ಅರ್ಥ್ ತಂತ್ರಜ್ಞಾನ ಬಳಸಿ ರಚಿಸಲಾಗಿದೆ. ರಾಷ್ಟ್ರಾದ್ಯಂತ ತಂತ್ರಜ್ಞಾನ ನಿಪುಣರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಗಿದೆ. ಈ ವೀಡಿಯೋ ರಾಷ್ಟ್ರ ಹಾಗೂ ರಾಜ್ಯಮಟ್ಟದ ವಾಹಿನಿಗಳಲ್ಲಿ ಪರೀಕ್ಷಾ ಪೇ ಚರ್ಚಾ ಪ್ರೋಮೋ ಆಗಿ ಮರುಪ್ರಸಾರವಾಗಿದೆ.
ವಿಡಿಯೋದಲ್ಲಿ ಐವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ವೀಕ್ಷಕರಿಗೆ ಅರ್ಜಿ ಸಲ್ಲಿಸಲು ತಮ್ಮ ಪ್ರೇರಣೆಯ ಮಾತುಗಳನ್ನಾಡಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಶಕೀಲಾ, ಅನ್ವಿತಾ, ವಿನಯಶ್ರೀ, ಅನುಶ್ರೀ, ನಿಖಿಲಾ, ವಿದ್ಯಾರ್ಥಿಗಳಾದ ಸಂತೋಷ ಕುಲಾಲ್, ಯಶವಂತ ಶೆಟ್ಟಿ ಸೇರಿದಂತೆ ಪಾಲ್ಗೊಂಡಿದ್ದಾರೆ. ಶಾಲೆಯಿಂದ ಒಟ್ಟು 60 ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಶಾಲೆಯಿಂದ ಎಲ್ಲರ ಸಹಕಾರದೊಂದಿಗೆ ಪರೀಕ್ಷಾ - ಪೇ ಚರ್ಚಾ 2021 ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದೇವೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ರಾಷ್ಟ್ರ ಮಟ್ಟದಲ್ಲಿ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುವುದಕ್ಕಾಗಿ, ಪ್ರಮೋಶನಲ್ ವೀಡಿಯೋ ಮಾಡಲು ನಮ್ಮ ಶಾಲೆಗೆ ಅವಕಾಶ ದೊರೆತಿರುವುದು ಹೆಮ್ಮೆಯಾಗಿದೆ. ಶೇಖರ್ ಶೆಟ್ಟಿಗಾರ್ ಮುಖ್ಯಶಿಕ್ಷಕರು, ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ, ಅಲ್ಬಾಡಿ- ಆರ್ಡಿ ಮಡಾಮಕ್ಕಿ ಸಮಿಪದ ಗ್ರಾಮೀಣ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದ ಕಾಡಿನಿಂದ ಅವೃತ್ತವಾದ ಅರೆಕಲ್ಲಾಣೆ ಎಂಬಲ್ಲಿ ನನ್ನ ಮನೆಯಿದೆ. ಮನೆಯಲ್ಲಿ ಕಂಪ್ಯೂಟರ್ ಸೌಲಭ್ಯಗಳಿಲ್ಲ. ಶಿಕ್ಷಕರ ಸಹಕಾರದೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನ ಮಂತ್ರಿ ಜತೆ ಸಂವಾದ ನಡೆಸಲು ಉತ್ಸುಕಳಾಗಿದ್ದೇನೆ. ಶಕೀಲಾ 10ನೇ ತರಗತಿಯ ವಿದ್ಯಾರ್ಥಿನಿ