ಬ್ಯಾಕ್‌ಲಾಗ್ ಹುದ್ದೆ ಸಂಪೂರ್ಣ ಭರ್ತಿಯಾಗಲಿ: ಎಸ್ಸಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ ಒತ್ತಾಯ

Promotion seminar Mandya
Published on

ಮಂಡ್ಯ: ಪಸ್ತುತ ದಿನಗಳಲ್ಲಾದರೂ ಸರ್ಕಾರಗಳು ಬ್ಯಾಕ್‌ಲಾಗ್ ಹುದ್ದೆಗಳನ್ನು ಸಂಪೂರ್ಣ ಭರ್ತಿಮಾಡಲಿ ಎಂದು ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಒತ್ತಾಯಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೋಧಕೇತರ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಬಡ್ತಿ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಸ್ಸಿ, ಎಸ್ಟಿ ನೌಕರರ ಬಡ್ತಿ ಮತ್ತು ಮೀಸಲಾತಿಗೆ ದೊಡ್ಡ ಹೊಡೆತ ನೀಡಲು ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ದ ಕಾನೂನಾತ್ಮಕ ಮತ್ತು ಸಂಘಟನಾತ್ಮಕವಾಗಿ ದೊಡ್ಡ ಚಳವಳಿಯನ್ನೇ ರೂಪಿಸಬೇಕಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. 3 ಲಕ್ಷ ಹುದ್ದೆಗಳು ಭರ್ತಿಯಾದರೆ 6 ಲಕ್ಷ ಜನರು ನೆಮ್ಮದಿ ಜೀವನ ನಡೆಲು ಸಾಧ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಬ್ಯಾಕ್‌ಲಾಗ್ ಹುದ್ದೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕಿದೆ. ಇನ್ನು ಮುಂದಿನ ದಿನಗಳಲ್ಲಿ ಬಡ್ತಿ ಮೀಸಲಾತಿಗೆ ನೀಡುತ್ತಿರುವ ಕಿರುಕುಳ ಮತ್ತು ಮೀಸಲಾತಿ ವಿರೋಧಿ ಮನಸ್ಥಿತಿಗಳ ವಿರುದ್ಧ ಕಚೇರಿಗಳಲ್ಲಿ ಪೆನ್ನುಗಳನ್ನು ಇಡುವುದರ ಮೂಲಕ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಸಂಘಟನಾತ್ಮಕ ಹೋರಾಟದಿಂದ ಯಶಸ್ಸು ಪಡೆದುಕೊಳ್ಳುವ ಹಾದಿಯನ್ನು ವಿರೋಧಿಗಳೇ ತೋರಿಸುತ್ತಾರೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಮೀಸಲಾತಿ ಪರವಾಗಿದೆ. ಆದರೆ ಕರ್ತವ್ಯದಲ್ಲಿರುವಂತಹ ಅಧಿಕಾರಿಗಳು ಮೀಸಲಾತಿ ವಂಚನೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಪಿಯು ಮಂಡಳಿಯಲ್ಲಿ ಸುಮಾರು 80 ಹುದ್ದೆ ನೀಡಬೇಕು ಎಂದು ವಿವಿಧ ಇಲಾಖೆಗಳು ತನಿಖೆ ವರದಿ ನೀಡಿವೆ. ಆದರೆ ನಿರ್ದೇಶಕರು ಮೀಸಲಾತಿ ವಿರೋಧಿ ಧೋರಣೆ ತಾಳಿದ್ದಾರೆ ಎಂದು ಕಿಡಿಕಾರಿದರು.

ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಶೋಷಿತ ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಭಾವಿ ಹುದ್ದೆಗಳತ್ತ ಹೆಚ್ಚು ಗಮನ ಹರಿಸಬೇಕು. ದೊಡ್ಡ ಹುದ್ದೆಗಳ ಪಡೆಯಲು ನಿಮ್ಮಿಂದ ಸಾಧ್ಯ. ಶೇ.90, ಶೇ.98ರಷ್ಟು ಅಂಕ ಪಡೆದು ಚಿಕ್ಕ ಹುದ್ದೆಗಳಿಗೆ ಹೋಗುವುದು ಸಾಧನೆಯಲ್ಲ. ಐಎಎಸ್, ಐಪಿಎಸ್ ಸೇರಿದಂತೆ ಇನ್ನು ಅನೇಕ ಹುದ್ದೆಗಳಿಗೆ ತಯಾರಿ ನಡೆಸಿ. ದಿನಕ್ಕೆ 8ಗಂಟೆ ಓದಿ. ಸ್ಪರ್ಧಾತ್ಮಕ ಪರೀಕ್ಷಗಳತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಿ. ಪಾಲಕರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ, ತರಬೇತಿ ಪಡೆದುಕೊಳ್ಳಿ. ಮಾರ್ಗದರ್ಶದಿಂದ ಸಾಧನೆ ಮಾಡಿ ಎಂದು ಕಿವಿಮಾತೇಳಿದರು.

ಸ್ಪೂರ್ತಿಧಾಮ ವಿಹಾರದ ಬೌದ್ಧ ಬಿಕ್ಕು ಧಮ್ಮವೀರ ಭಂತೇಜಿ, ಡಿಡಿಪಿಯು ಸಿ.ಚೆಲುವಯ್ಯ, ರಾಜ್ಯ ಪದವಿ ಪೂರ್ವ ಕಾಲೇಜು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಧಿಕಾರಿಗಳು ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೋಧಕೇತರ ನೌಕರರ ಸಂಘ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಯು.ಜಯರಾಮು, ಉಪನ್ಯಾಸಕ ಹನುಮಂತರಾಯಪ್ಪ, ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಚಂದ್ರಲಿಂಗು, ಖಜಾಂಚಿ ಸಿ.ಎಲ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಗುರುಸ್ವಾಮಿ, ಉಪಾಧ್ಯಕ್ಷೆ ಮಮತಾ, ಪಿ.ಲಂಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net