ಸಾಮಾಜಿಕ ಜಾಲತಾಣದಲ್ಲಿ ನುಡಿಜಾತ್ರೆ ಸಂಭ್ರಮ: ಸಮ್ಮೇಳನದ ಪ್ರತಿ ಮಾಹಿತಿಯೂ ಲಭ್ಯ

Promotion on social media Mandya
Published on

ಮಂಡ್ಯ: ಮೂರು ದಶಕದ ಬಳಿಕ ಮಂಡ್ಯ ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಮಾತ್ರವಲ್ಲದೆ ನುಡಿಜಾತ್ರೆಯ ಸಂಭ್ರಮ ಹಂತ ಹಂತವಾಗಿ ಕಳೆಗಟ್ಟುತ್ತಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿಯೂ ಸಮ್ಮೇಳನದ ಸಂಭ್ರಮ ಅನುಭವಿಸುವಂತೆ ಮಾಡಲು ಪ್ರಚಾರ ಸಮಿತಿ ಮುಂದಾಗಿದೆ. ಸಾಮಾಜಿಕ ಜಾಲತಾಣವಿಂದು ಬಲಿಷ್ಟ ವೇದಿಕೆಯಾಗಿದೆ. ಕ್ಷಣಮಾತ್ರದಲ್ಲಿ ಅಸಂಖ್ಯಾತ ಜನರನ್ನು ತಲುಪುವುದರ ಜತೆಗೆ ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆನಾಡಿನಲ್ಲಿ ನಡೆಯಲಿರುವ ನುಡಿಜಾತ್ರೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಸಾಮಾಜಿಕ ಜಾಲತಾಣದಲ್ಲಿಯೂ ಖಾತೆ ತೆರೆಯಲಾಗಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಪ್ರಚಾರ ಸಮಿತಿ ಪ್ರಾರಂಭದ ದಿನದಿಂದಲೂ ಉತ್ತಮ ರೀತಿ ಕೆಲಸ ನಿರ್ವಹಿಸುತ್ತಿದೆ. ಈ ಸಮಿತಿಯ ಅಧ್ಯಕ್ಷತೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸಭೆಯನ್ನು ಮಾಡಿದ್ದು, ನುಡಿಜಾತ್ರೆ ಹೆಚ್ಚಿನ ಪ್ರಚಾರ ಮಾಡುವ ನಿಟ್ಟಿನಲ್ಲಿ ಉಪಸಮಿತಿ ರಚಿಸಿದ್ದಾರೆ. ಜನರನ್ನು ತಲುಪುವ ಯಾವುದೇ ಮಾರ್ಗವಾದರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಾರಣ ಸಮ್ಮೇಳನದ ಯಶಸ್ಸಿಗೆ ಜನರು ಪಾಲ್ಗೊಳ್ಳುವಿಕೆ ಮುಖ್ಯ. ಆದ್ದರಿಂದ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಸದಸ್ಯರನ್ನು ಹುರಿದುಂಬಿಸುತ್ತಿದ್ದಾರೆ. 1.30 ಕೋಟಿ ರೂ ಬಜೆಟ್: ಸಮ್ಮೇಳನದ ಪ್ರಚಾರಕ್ಕೆ 1.30 ಕೋಟಿ ರೂ ತಾತ್ಕಾಲಿಕ ಬಜೆಟ್ ಮಂಡನೆ ಮಾಡಲಾಗಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಪಾರದರ್ಶಕವಾಗಿರಬೇಕೆಂದು ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದ್ದಾರೆ. ಪ್ರಚಾರಕ್ಕೆ ಸಂಬಂಧಿಸಿದಂತೆ ಮೊದಲ ಹಂತವಾಗಿ ೇಸ್ಬುಕ್, ಇನ್‌ಸ್ಟಾಗ್ರಾಂ, ಎಕ್ಸ್‌ನಲ್ಲಿ ಅಧಿಕೃತ ಖಾತೆ ತೆರೆಯಲಾಗಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪ್ರತಿ ಹಂತದ ಬೆಳವಣಿಗೆಯೂ ಇಲ್ಲಿ ಲಭ್ಯವಾಗಲಿದೆ. ಕ್ಯೂ ಆರ್ ಕೋಡ್ ಸ್ಕಾೃನ್ ಮೂಲಕ ಖಾತೆಗಳನ್ನು ಹಿಂಬಾಲಿಸಬಹುದಾಗಿದೆ. ಮುಂದಿನ ಹಂತದಲ್ಲಿ ಮನೆಗಳ ಮೇಲೆ, ಆಟೋ, ಕಾರ್ ಸ್ಟಿಕ್ಕರ್, ಗೋಡೆ ಬರಹ, ಸರ್ಕಾರಿ ಹೋರ್ಡಿಂಗ್ಸ್‌ಗಳಲ್ಲಿ ಪ್ರಮುಖ ವೃತ್ತಗಳಲ್ಲಿ ರಿಂಗ್ಸ್ ಹಾಗೂ ಇತರೆ ಫ್ಲೆಕ್ಸ್ ಅಳವಡಿಕೆ ಜತೆಗೆ ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ ಬೈಸಿಕಲ್ ಜಾಥಾ, ಪ್ರತಿ ಬಸ್ ನಿಲ್ದಾಣಗಳಲ್ಲಿ ಫ್ಲೆಕ್ಸ್ ಅಳವಡಿಕೆ, ಆಟೋ ಚಾಲಕರಿಗೆ ಕನ್ನಡದ ಬಾವುಟ ಹಾಗೂ ಸ್ಟಿಕ್ಕರ್ಸ್ ನೀಡಿ ಆ ಮೂಲಕ ನವೆಂಬರ್‌ನಿಂದ ಡಿಸೆಂಬರ್‌ವರೆಗೂ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಲಾರಿ, ಬಸ್ ಹಾಗೂ ಇತರೆ ವಾಹನಗಳ ಮಾಲೀಕರ/ಚಾಲಕರ ಸಂಘದವರಲ್ಲಿ ಮನವಿ ಮಾಡಿ, ತಮ್ಮ ವಾಹನಗಳಲ್ಲಿ ಸಮ್ಮೇಳನದ ಭಿತ್ತಿಪತ್ರ ಮತ್ತು ಸ್ಟಿಕ್ಕರ್ ಅಂಟಿಸಿ ಪ್ರಚಾರ ಮಾಡಲು ಮನವಿ ಮಾಡಲಾಗುತ್ತಿದೆ.

ಜನರು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪರಿಣಾಮಕಾರಿ ಪ್ರಚಾರದ ಅವಶ್ಯಕವಿದೆ. ಸುತ್ತಮುತ್ತಲಿನ ಹಳ್ಳಿ, ನಗರ ಪ್ರದೇಶದ ಜನರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವುದು ಪ್ರಚಾರ ಸಮಿತಿಯ ಜವಾಬ್ದಾರಿ. ಎಲ್ಲರೂ ವ್ಯವಸ್ಥಿತ ಹಾಗೂ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸೋಣ. ಇರುವ ವೆಚ್ಚದಲ್ಲಿಯೇ ಬಹಳ ಚುರುಕಾಗಿ ಪ್ರಚಾರ ನಡೆಯಬೇಕು. ದರ್ಶನ್ ಪುಟ್ಟಣ್ಣಯ್ಯ ಶಾಸಕ, ಪ್ರಚಾರ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net