

ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಿಗೆ (ಎಎಸ್ಐ) ಮುಂಬಡ್ತಿ ಭಾಗ್ಯ ಒಲಿದು ಬಂದಿದೆ. ವಲಯ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಖಾಲಿ ಉಳಿದಿರುವ ಎಸ್ಐ ಹುದ್ದೆಗಳಿಗೆ ಎಎಸ್ಐಗಳಿಗೆ ಮುಂಬಡ್ತಿ ಕೊಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಆದೇಶಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಹೊಸ ನೇಮಕಾತಿ ವಿಳಂಬವಾಗಲಿದೆ. ಆದ್ದರಿಂದ ಹುದ್ದೆಯಾಧಾರಿತ ಪದ್ಧತಿ ಅಳವಡಿಸಿಕೊಂಡು ವಲಯ ಹಾಗೂ ಕಮಿಷನರೇಟ್ ಟಕಗಳಲ್ಲಿರುವ ಎಲ್ಲ ಮುಂಬಡ್ತಿ ಹುದ್ದೆಗಳಿಗೆ ಬಡ್ತಿ ಕೊಡುವಂತೆ ಸೂಚಿಸಲಾಗಿದೆ. ಹೀಗಾಗಿ ಎಎಸ್ಐ ಹುದ್ದೆಯಲ್ಲೇ ನಿವೃತ್ತಿಯಾಗಬೇಕಿದ್ದವರೀಗ ಎಸ್ಐ ಹುದ್ದೆಗೇರಿ ನಿವೃತ್ತಿಯಾಗಲಿದ್ದಾರೆ.
ಹನ್ನೆರಡು ಪೊಲೀಸರು ಅಮಾನತು
ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇರೆಗೆ 12 ಪೊಲೀಸರನ್ನು ಅಮಾನತು ಮಾಡಲಾಗಿದೆ. ಬಂಧಿತರಾಗಿರುವ ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲಾ ಪೊಲೀಸ್ ಫಿಂಗರ್ ಪ್ರಿಂಟ್ ವಿಭಾಗದ ಸಿಪಿಐ ಆನಂದ ಮೇತ್ರೆ ಸಸ್ಪೆಂಡ್ ಆದವರಲ್ಲಿ ಪ್ರಮುಖರಾಗಿದ್ದಾರೆ.
ಲಭ್ಯವಿಲ್ಲದಿದ್ದಲ್ಲಿ?
ಯಾವುದೇ ವಲಯ ಹಾಗೂ ಕಮಿಷನರೇಟ್ ಟಕಗಳಲ್ಲಿ ಜೇಷ್ಠತೆ ಅನುಸಾರ ಮುಂಬಡ್ತಿಗೆ ಅರ್ಹರಿರುವ ಎಎಸ್ಐಗಳು ಲಭ್ಯವಿದ್ದು, ಮುಂಬಡ್ತಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ ತೃಪ್ತಿಕರ ಸೇವೆಯನ್ನು ಪರಿಗಣಿಸಿ, ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅನ್ವಯ ಸ್ವತಂತ್ರ ಪ್ರಭಾರ ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿರಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವತಂತ್ರ ಪ್ರಭಾರ ಹುದ್ದೆಯೂ ತಾತ್ಕಾಲಿಕವಾಗಿರಲಿದೆ. ಯಾವುದೇ ಜೇಷ್ಠತೆ ಹಾಗೂ ಪೂರ್ವಾನ್ವಯವಾಗುವ ಮುಂಬಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲ. ನೇರ ನೇಮಕಾತಿ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳು ವರದಿ ಮಾಡಿಕೊಂಡ ಕೂಡಲೇ ಹುದ್ದೆ ಬಿಟ್ಟುಕೊಡಬೇಕು ಎಂದು ಲಿಖಿತ ಒಪ್ಪಿಗೆ ಪತ್ರ ಬರೆಸಿಕೊಳ್ಳುವಂತೆ ಪ್ರವಿಣ್ ಸೂದ್ ಆದೇಶಿಸಿದ್ದಾರೆ. ಹುದ್ದೆಯಾಧಾರಿತ ಮುಂಬಡ್ತಿ ಹಾಗೂ ಸ್ವತಂತ್ರ ಪ್ರಭಾರ ಹುದ್ದೆಯಲ್ಲಿರುವ ಪ್ರಕ್ರಿಯೆಯನ್ನೂ ಕೂಡಲೇ ಕೈಗೊಳ್ಳಬೇಕು. ಇದರ ಮಾಹಿತಿಯನ್ನು ಪ್ರಧಾನ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಡಿಜಿಪಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.