ಬಿ ಖಾತಾ ಅಭಿಯಾನಕ್ಕೆ ಪ್ರಚಾರ ನೀಡಿ

B khata
Published on

ಶಿರಸಿ: ಅನಧಿಕೃತ ಕಟ್ಟಡ, ನಿವೇಶನಗಳಿಗೆ ಸಂಬಂಧಿಸಿ ಸರ್ಕಾರ ನೀಡಲುದ್ದೇಶಿಸಿರುವ ಬಿ ಖಾತಾ ಪ್ರಮಾಣಪತ್ರವನ್ನು ನಗರಸಭೆಯಿಂದ ಮೊದಲ ಹಂತದಲ್ಲಿ 200ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿತರಿಸಲಾಯಿತು.

ನಗರಸಭೆ ಆವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ವಿತರಣೆ ಮಾಡಿದರು. ನಗರದಲ್ಲಿ ಅನಧಿಕೃತ ಆಸ್ತಿಗಳು 2878 ಇದ್ದು ಅದರಲ್ಲಿ 528 ಆಸ್ತಿಗಳಿಗೆ ಸಂಬಂಧಿಸಿ ಜನ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳಲ್ಲಿ 201 ಫಲಾನುಭವಿಗಳಿಗೆ ಬಿ-ಖಾತಾ ನೀಡಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಸಿದ 227ಮಂದಿಗೆ ಬಿ-ಖಾತಾ ನೀಡಬೇಕಿದೆ. ನಗರದಲ್ಲಿ ಸಾವಿರಾರು ಆಸ್ತಿಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಕೆ ಬಾಕಿ ಇದೆ. ಈ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿ ಮಾಹಿತಿ ತಿಳಿಸಬೇಕು. ಹೊರ ಊರುಗಳಲ್ಲಿ ನೆಲೆಸಿದವರೂ ಸಹ ಇಲ್ಲಿನ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಬಿ-ಖಾತಾ ಪಡೆಯುವುದಕ್ಕೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ನಗರಸಭೆಗೆ ಅಲೆದಾಡಿಸಬೇಡಿ...

ನಗರದ 31ವಾರ್ಡ್‌ಗಳ ವ್ಯಾಪ್ತಿಯಲ್ಲಿ ಜನ ಸಮಸ್ಯೆ ಹೇಳಿಕೊಂಡು ನಗರಸಭೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಅವರನ್ನು ಸಿಬ್ಬಂದಿ ಸುಮ್ಮನೆ ಅಲೆದಾಡಿಸಬಾರದು. ಹಾಗೇ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಅರ್ಜಿಯನ್ನು ತಿರಸ್ಕಾರ ಮಾಡದೇ ಸರಿಯಾದ ಮಾರ್ಗದರ್ಶನ ನೀಡಿ ಅವರ ಸಮಸ್ಯೆ ಪರಿಹರಿಸುವುದಕ್ಕೆ ಪ್ರಯತ್ನಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಅನಧಿಕೃತ ಆಸ್ತಿಗಳಿಗೆ ದಾಖಲೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಹೀಗೆ ಬಿ-ಖಾತಾ ಪಡೆದವರಿಗೆ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ ಸಿಗುವಂತೆ ಆಗಬೇಕು ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸದಸ್ಯೆ ವೀಣಾ ಶೆಟ್ಟಿ ಮುಂತಾದವರು ಇದ್ದರು. ಪೌರಾಯುಕ್ತ ಕಾಂತರಾಜ್ ಸ್ವಾಗತಿಸಿದರು. ವೇಣುಗೋಪಾಲ ಶಾಸ್ತ್ರಿ ನಿರೂಪಿಸಿದರು. ಸುಬ್ರಹ್ಮಣ್ಯ ಹೆಗಡೆ ವಂದಿಸಿದರು.

ಕಾಮಗಾರಿ ಕೈಗೊಳ್ಳಿ... ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ. ನಗರೋತ್ಥಾನ ಯೋಜನೆಯಡಿ ಆಗಬೇಕಾದ ಕಾಮಗಾರಿಗಳನ್ನು ಗುತ್ತಿಗೆದಾರರು ಟೆಂಡರ್ ಪಡೆದರೂ ಕೆಲಸ ಮಾಡುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವಿವರ ನೀಡಿದ್ದೇನೆ. ಗುತ್ತಿಗೆ ಪಡೆದವರು ನಿಗದಿತ ಸಮಯದಲ್ಲಿ ಕಾಮಗಾರಿ ನಡೆಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶಿರಸಿ ನಗರಕ್ಕೆ ನೀರು ಪೂರೈಸುವ ನೀರಿನ ಮೂಲ ಕಡಿಮೆಯಾಗುತ್ತಿದೆ. ಬೇಸಿಗೆಯ ಅಬ್ಬರಕ್ಕೆ ನೀರು ಬತ್ತುತ್ತಿದೆ. ಬೋರ್‌ವೆಲ್ ಕೊರೆಯಲಾಗಿದೆ. ಆದರೂ ಇನ್ನಷ್ಟು ನೀರಿನ ಮೂಲ ಬೇಕಾಗುತ್ತದೆ. ಭೀಮಣ್ಣ ನಾಯ್ಕ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net