ಮೈಸೂರಿಗೆ ಭರವಸೆಯ ಸ್ವಚ್ಛ ನಗರ ಪ್ರಶಸ್ತಿ


ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ನಗರಕ್ಕೆ ಭರವಸೆಯ ಸ್ವಚ್ಛ ನಗರ ಪ್ರಶಸ್ತಿ ಪ್ರದಾನ ಮಾಡಿದರು. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಪಾಲಿಕೆ ಆಡಳಿತಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಪ್ರಶಸ್ತಿ ಸ್ವೀಕರಿಸಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ನಗರಕ್ಕೆ ಭರವಸೆಯ ಸ್ವಚ್ಛ ನಗರ ಪ್ರಶಸ್ತಿ ಪ್ರದಾನ ಮಾಡಿದರು. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಪಾಲಿಕೆ ಆಡಳಿತಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಪ್ರಶಸ್ತಿ ಸ್ವೀಕರಿಸಿದರು.
Published on: 

ಮೈಸೂರು: ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿಯ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಭರವಸೆಯ ಸ್ವಚ್ಛ ನಗರ ಪ್ರಶಸ್ತಿಗೆ ಭಾಜನವಾಗಿದೆ. ಆದರೆ, ದೇಶದ ಟಾಪ್-3 ಸ್ವಚ್ಛ ನಗರಗಳ ರ‌್ಯಾಂಕಿಂಗ್‌ನಲ್ಲಿ ಸ್ಥಾನ ಪಡೆಯುವಲ್ಲಿ ನಗರ ಈ ಬಾರಿ ವಿಫಲವಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ನಗರದಲ್ಲಿ ಸ್ವಚ್ಛತೆ ಕಾಪಾಡುವುದು, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆ, ಪಾರಂಪರಿಕ ತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಈ ಬಾರಿ ಒಟ್ಟಾಗಿ ಕೈಜೋಡಿಸಿ ಶುಚಿಗೊಳಿಸಿ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛ ಸರ್ವೇಕ್ಷಣ್ ನಡೆಸಲಾಗಿತ್ತು. ನಗರಗಳ ಸ್ವಚ್ಛತಾ ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸ್ವಚ್ಛತಾ ವ್ಯವಸ್ಥೆಯ ಪರಿಣಾಮಕಾರಿತ್ವ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ನಗರಗಳ ಸಾಧನೆಯನ್ನು ಮೌಲ್ಯಮಾಪನ ಮಾಡಲಾಗಿದೆ.

ಕಳೆದ ಬಾರಿ ರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಪರಿಕಲ್ಪನೆ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ನಡೆದಿತ್ತು. ಈ ಬಾರಿಯೂ ಒಟ್ಟು 12,500 ಅಂಕಗಳಿಗೆ ನಗರಗಳ ನಡುವೆ ಸ್ಪರ್ಧೆ ನಡೆದಿದ್ದು, ಸ್ವಚ್ಛತೆಯನ್ನು ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿ ಪರಿಗಣಿಸದೆ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಗರವನ್ನು ಸ್ವಚ್ಛವಾಗಿಡುವ ಆಶಯಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು.

ಮೈಸೂರಿನ ಸಾಧನೆ:

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮೈಸೂರು ಈ ಹಿಂದೆ ಗಮನಾರ್ಹ ಸಾಧನೆ ಮಾಡಿತ್ತು. 2015 ಮತ್ತು 2016ರಲ್ಲಿ ಸತತ ಎರಡು ವರ್ಷ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಮೊದಲ ಸ್ಥಾನ ಗಳಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಬಳಿಕ 2017ರಲ್ಲಿ ಐದನೇ ಸ್ಥಾನ, 2018ರಲ್ಲಿ ಎಂಟನೇ ಸ್ಥಾನ, 2019ರಲ್ಲಿ ಮೂರನೇ ಸ್ಥಾನ ಹಾಗೂ 2020ರಲ್ಲಿ ಐದನೇ ಸ್ಥಾನ ಪಡೆದಿತ್ತು.

2021ರಲ್ಲಿ 11ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು, 2022ರಲ್ಲಿ ಎಂಟನೇ ಸ್ಥಾನ ಗಳಿಸಿತ್ತು. 2023ರಲ್ಲಿ 27ನೇ ಸ್ಥಾನಕ್ಕೆ ಕುಸಿಯುವ ಮೂಲಕ ತನ್ನ ಹಿಂದಿನ ಸ್ಥಾನಮಾನ ಕಳೆದುಕೊಂಡಿತ್ತು. 2024-25ನೇ ಸಾಲಿನಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿಗೆ ಭಾಜನವಾಗಿತ್ತು. ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ನಗರಗಳನ್ನು ಸಾಮಾನ್ಯ ರ‌್ಯಾಂಕಿಂಗ್ ಪಟ್ಟಿಯಿಂದ ಹೊರಗಿಡಲಾಗಿದ್ದರಿಂದ ಕಳೆದ ಸಾಲಿನಲ್ಲಿ ಮೈಸೂರಿನ ಸ್ಥಾನವನ್ನು ಸಾಮಾನ್ಯ ರ‌್ಯಾಂಕಿಂಗ್ ಆಧಾರದಲ್ಲಿ ಪರಿಗಣಿಸಿರಲಿಲ್ಲ. ಈ ರ‌್ಯಾಂಕಿಂಗ್ ಮಾತ್ರವಲ್ಲದೆ ಮೈಸೂರು ಸ್ವಚ್ಛತೆಯಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ನಿರಂತರವಾಗಿ ಪಡೆಯುತ್ತಾ ಬಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಪಾಲಿಕೆ ಆಡಳಿತಾಧಿಕಾರಿ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ರಾಜ್ಯದ ಸ್ವಚ್ಛ ಭಾರತ್ ಮಿಷನ್‌ನ ನಿರ್ದೇಶಕಿ ಡಾ. ಸೆಲ್ವಮಣಿ, ನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ (ಪರಿಸರ) ಕೆ.ಎಸ್. ಮೃತ್ಯುಂಜಯ ಪಾಲ್ಗೊಂಡಿದ್ದರು.

ಮೈಸೂರಿಗೆ ಈ ಬಾರಿ ಪ್ರಶಸ್ತಿ ದೊರೆಯಲು ಪೌರಕಾರ್ಮಿಕರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಮೈಸೂರನ್ನು ರಾಷ್ಟ್ರಮಟ್ಟದ ಅತ್ಯಂತ ಸ್ವಚ್ಛ ಹಾಗೂ ಸುಸ್ಥಿರ ನಗರಗಳ ಸಾಲಿನಲ್ಲಿ ಮುಂಚೂಣಿಗೆ ತರಲು ಶ್ರಮಿಸಲಾಗುವುದು.

ಎಂ.ಕೆ. ಸವಿತಾ, ಆಯುಕ್ತರು, ನಗರ ಪಾಲಿಕೆ