ಅಲೆಮಾರಿಗಳಿಗೆ ಮೂಲಸೌಲಭ್ಯ ಕಲ್ಪಿಸುವ ಭರವಸೆ: ಅಭಿವೃದ್ಧಿ ನಿಗಮದ ಡೈರೆಕ್ಟರ್ ಮಲ್ಲಿಕಾರ್ಜುನ ಭೇಟಿ

Alemari jananga
Published on

ಹಾನಗಲ್ಲ: ಪಟ್ಟಣದ ಹೊರವಲಯದ ಗುಡಿಸಲುವಾಸಿ ಅಲೆಮಾರಿಗಳ ಪ್ರದೇಶಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಭೇಟಿ ನೀಡಿ, ಕುಡಿಯುವ ನೀರು, ರಸ್ತೆ, ಸುರಕ್ಷಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಅಲೆಮಾರಿಗಳ ಸಮಸ್ಯೆಗಳ ಕುರಿತು ವಿಜಯವಾಣಿ ಏ. 27ರಂದು ‘ಕನಿಷ್ಠ ಸೌಲಭ್ಯ ಅಲೆಮಾರಿಗಳ ಪರದಾಟ’ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪಾಳಾ ರಸ್ತೆಯ ಬದಿ ಇರುವ ಅಲೆಮಾರಿಗಳ ವಸತಿಗೆ ಭೇಟಿ ನೀಡಿ, ಅಲ್ಲಿನವರ ಕಷ್ಟಗಳ ಕುರಿತು ರ್ಚಚಿಸಿದರು. ರಸ್ತೆ ಇಲ್ಲದ, ಸುರಕ್ಷಿತ ವಿದ್ಯುತ್ ಸಂಪರ್ಕವಿಲ್ಲದ, ಕುಡಿಯುವ ನೀರಿಲ್ಲದ ಸ್ಥಿತಿಯ ಬಗೆಗೆ ರ್ಚಚಿಸಿ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಅದಕ್ಕೆ ಬೇಕಾಗುವ ಅನುದಾನವನ್ನು ತಮ್ಮ ನಿಗಮದಿಂದ ನೀಡುವುದಾಗಿ ಪ್ರಕಟಿಸಿದರು.

ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರೊಂದಿಗೆ ಮಾತನಾಡಿ, ಕೂಡಲೇ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೇಕಾಗುವ ಅನುದಾನದ ಮೊತ್ತವನ್ನು ತಿಳಿಸಲು ಸೂಚಿಸಿದರು. ಶೀಘ್ರ ಇಲ್ಲಿನ ಅಲೆಮಾರಿಗಳಿಗೆ ನೀಡಿದ ವಸತಿ ನಿವೇಶನಗಳ ಅಳತೆಯನ್ನು ಸರಿಪಡಿಸಿ ನೀಡಲು ತಿಳಿಸಿದರು. ಇಲ್ಲದಿದ್ದರೆ ಇವರಿಗೆ ಮನೆ ಕಟ್ಟಿಕೊಳ್ಳಲೂ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ ಎಂದು ಗಮನ ಸೆಳೆದರು.

ಮಳೆ ಗಾಳಿಯಿಂದ ತಾತ್ಕಾಲಿಕ ರಕ್ಷಣೆಗಾಗಿ ಸದ್ಯಕ್ಕೆ ನಿರ್ವಿುಸಿಕೊಂಡ ಗುಡಿಸಲುಗಳಿಗೆ ಎರಡು ಮೂರು ದಿನಗಳಲ್ಲಿ ಅಗತ್ಯವಾದ ತಾಡಪಾಲುಗಳನ್ನು ಒದಗಿಸುವುದಾಗಿ ತಿಳಿಸಿದರು. ಉಳಿದೆಲ್ಲ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿ, ತಾಲೂಕು ತಹಸೀಲ್ದಾರರು, ವಿದ್ಯುತ್ ಇಲಾಖೆ, ಪುರಸಭೆಗೆ ಪತ್ರ ಬರೆದು ಕ್ರಮಕ್ಕೆ ಗಮನ ಸೆಳೆಯುವುದಾಗಿ ತಿಳಿಸಿದರು. ಅಸುರಕ್ಷಿತ ವಿದ್ಯುತ್ ಸಂಪರ್ಕ ಹಾಗೂ ನಿವೇಶನಗಳ ಮೇಲೆ ಹಾದು ಹೋದ ಹೈ ವೋಲ್ಟೇಜ್ ವಿದ್ಯುತ್ ತಂತಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ವಿವರಿಸಿದರು.

ಅಲೆಮಾರಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕೆ ಆದ್ಯತೆ ನೀಡಿರಿ. ಕಿತ್ತೂರು ಚನ್ನಮ್ಮ, ಮುರಾರ್ಜಿ ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿ ಅಲೆಮಾರಿಗಳಿಗೆ ಹೆಚ್ಚು ಸೌಲಭ್ಯಗಳಿವೆ. ಅಲ್ಲಿ ಮಕ್ಕಳನ್ನು ಓದಲು ಸೇರಿಸಿ. ನಮಗೆ ಮಾಹಿತಿ ನೀಡಿದರೆ ಇಲಾಖೆಯಿಂದಲೇ ಸೂಚಿಸಿ ನಿಮ್ಮ ಮಕ್ಕಳ ಶಾಲಾ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುವುದು ಎಂದರು ತಿಳಿಸಿದರು.

ಸಮಾಜ ಸೇವಕ ನಾಗಭೂಷಣ, ಅಲೆಮಾರಿಗಳ ಪ್ರತಿನಿಧಿ ಸೋಮಣ್ಣ ಇದ್ದರು.

ಅಂಗನವಾಡಿ ಬೇಡಿಕೆ

ನಮಗೆ ಇಲ್ಲಿಂದ ದೂರದ ಅಂಗವಾಡಿಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ನಮ್ಮ ಮಕ್ಕಳಿಗೊಂದು ಅಂಗನವಾಡಿಯನ್ನು ಇಲ್ಲಿಯೇ ತೆರೆಯಲು ಮನವಿ ಮಾಡಿದರು. ಇಲ್ಲದೇ ಹೋದರೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ನಾವು ಇಡೀ ದಿನ ಹೊಟ್ಟೆ ಪಾಡಿಗಾಗಿ ಊರೂರು ಅಲೆದು ಬರುತ್ತೇವೆ. ಇಲ್ಲಿಯೇ ಅಂಗನವಾಡಿ ತೆರೆದರೆ ಅನುಕೂಲ ಎಂದು ಅಲೇಮಾರಿ ಸಮುದಾಯದವರು ಮನವಿ ಮಾಡಿದರು.

ಕಾಲ ಕಾಲಕ್ಕೆ ಹಿರಿಯ ಅಧಿಕಾರಿಗಳನ್ನು ಸಂರ್ಪಸಿ ನಿಮ್ಮ ಸೌಲಭ್ಯಗಳಿಗೆ ಮನವಿ ಮಾಡಿರಿ. ನಿಮ್ಮ ಮನವಿಗೆ ಮನ್ನಣೆ ಸಿಗದಿದ್ದಾಗ ಸಂಘಟನೆ ನಿಮ್ಮ ಜತೆ ಇದೆ. ಸರ್ಕಾರದ ಸೌಲಭ್ಯದ ಜತೆ ನಿಮ್ಮ ಪ್ರಯತ್ನವೂ ಇರಲಿ. ನಮ್ಮ ಸಂಘಟನೆ ಸದಾ ನಿಮ್ಮ ಬೆನ್ನಿಗಿದೆ ಎಂದರು. | ವೀರೇಶ ವಿಭೂತಿ, ರಾಜ್ಯ ಎಸ್​ಸಿ ಎಸ್​ಟಿ ಹಾಗೂ ಅಲೆಮಾರಿ ಬುಡಕಟ್ಟು ಜನಾಂಗಗಳ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net