

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಸಂತ್ರಸ್ತರಿಗೆ ಸರ್ಕಾರ ಒಪ್ಪಿಗೆ ಸೂತ್ರದಡಿ ಸಮರ್ಪಕ ಪರಿಹಾರ ಘೋಷಣೆ ಮಾಡಿದ್ದು, ಇದರಿಂದ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಿ ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತಿತರ ಜಿಲ್ಲೆಗಳ ಬಾಕಿ ಭೂಮಿಗೆ ನೀರಾವರಿ ಕಲ್ಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ದೇವರ ಗಣ್ಣೂರಿನಲ್ಲಿ ಕೃಷ್ಣ ಮೇಲ್ದಂಡೆ ಹಂತ-3ರ ಯೋಜನಾ ಸಂತ್ರಸ್ತರಿಗೆ ಯೋಗ್ಯ ದರ ನಿಗದಿ ಪಡಿಸಿದ ಅಂಗವಾಗಿ ಯೋಜನಾ ಸಂತ್ರಸ್ತರು ಸೋಮವಾರ ಸಂಜೆ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಭೂಸ್ವಾಧೀನದಡಿ ಭೂಮಿ ಕಳೆದುಕೊಳ್ಳುವ ರೈತರಿಗೆ ಹಕ್ಕಿನಂತೆ ಸಿಗಬೇಕಾದ ಪರಿಹಾರವನ್ನು ಕನ್ಸೆಂಟ್(ಒಪ್ಪಿಗೆ) ಅನ್ವಯ ನೀಡುವುದಾಗಿ ರೈತರನ್ನು ದಾರಿ ತಪ್ಪಿಸಿತ್ತು. ಆದರೇ, ಅಂದೇ ನಾನು ರೈತರಿಗೆ ಹಕ್ಕಿನಂತೆ ದೊರೆಯುವ ಪರಿಹಾರ ಮತ್ತು ಒಪ್ಪಂದದಂತೆ ಸಿಗುವ ಪರಿಹಾರದ ಮೊತ್ತದ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹೇಳಿದ್ದೆ. ಅಲ್ಲದೇ, ಬೊಮ್ಮಾಯಿ ಸಮ್ಮುಖದಲ್ಲಿಯೇ ವೇದಿಕೆಯ ಮೇಲೆ ರೈತರು ಈ ಸೂತ್ರವನ್ನು ಒಪ್ಪಬೇಡಿ. ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಅನ್ಯಾಯ ಸರಿಪಡಿಸುವುದಾಗಿ ನಾನು ಭರವಸೆ ನೀಡಿದ್ದೆ. ಇಂದು ನುಡಿದಂತೆ ನಡೆಯುತ್ತಿದ್ದೇವೆ ಎಂದರು.
ಈ ಯೋಜನೆಗೆ ಒಟ್ಟು ರೂ. 2 ಲಕ್ಷ ಕೋಟಿ ಹಣ ಬೇಕು ಎಂದು ಕೆಲವರು ಬಿಂಬಿಸಿದ್ದರು. ಆದರೆ, ನಾನು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಎಳೆ ಎಳೆಯಾಗಿ ಹೇಳಿದ್ದೆ. ಇದನ್ನು ಮುಂದೆ ಹಾಕಿದರೆ ಭವಿಷ್ಯದಲ್ಲಿ ಈ ಯೋಜನೆ ಮತ್ತೆ ನನೆಗುದಿಗೆ ಬೀಳಲಿದೆ ಎಂದು ಸಿಎಂ ಮತ್ತು ಡಿಸಿಎಂ ಅವರಿಗೆ ಇತ್ತೀಚೆಗೆ ಮನವರಿಕೆ ಮಾಡಿದ್ದೆ. ಇದನ್ನು ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರೂ ಬೆಂಬಲಿಸಿದ್ದರು. ಈಗ ಮೂರು ಹಂತಗಳಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗ ರೂ. 40 ಲಕ್ಷ ಮತ್ತು ಒಣಬೇಸಾಯ ಜಮೀನಿಗೆ ರೂ. 30 ಲಕ್ಷ ದರ ಪರಿಹಾರ ನಿಗದಿ ಪಡಿಸಲಾಗಿದೆ ಎಂದರು.
ರೈತರು ಮಾಡುವ ತ್ಯಾಗದಿಂದ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಬಾಕಿ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ರೈತರಿಗೆ ಕನ್ಸೆಂಟ್(ಒಪ್ಪಿಗೆ) ಸೂತ್ರದಡಿ ಸೂಕ್ತ ಪರಿಹಾರ ನೀಡಲು ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದರಲ್ಲದೇ, ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಗೆ ಎದುರಾದ ಅಡ್ಡಿ, ಆತಂಕಗಳು, ಅವುಗಳನ್ನು ಸಮರ್ಥವಾಗಿ ಎದುರಿಸಿದ ಘಟನೆಗಳನ್ನೇ ಎಳೆ ಎಳೆಯಾಗಿ ವಿವರಿಸಿದರು.
ನಂದಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆಯನ್ನು ಎನ್‌ಸಿಡಿಸಿಯಿಂದ ಮತ್ತೆ ರಾಜ್ಯಕ್ಕೆ ವಾಪಸ್ ಕಳುಹಿಸಿದೆ. ಈ ಕಾರ್ಖಾನೆ ಈ ಭಾಗದ ರೈತರಿಗೆ ಅಸ್ಮಿತೆಯಾಗಿದ್ದು, ರೈತರಿಗೆ ನೆರವಾಗಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಾರ್ಖಾನೆಯ ಉಳಿವಿಗೆ ಎಲ್ಲರೂ ಕೈಜೋಡಿಸಿ ಉಳಿಸೋಣ ಎಂದರು.
ಮುಖಂಡರಾದ ಬಬಲಾದಿಯ ಅಪ್ಪಯ್ಯ ಹಿರೇಮಠ, ಅದೃಷ್ಯಪ್ಪ ವಾಸಣ್ಣ ದೇಸಾಯಿ, ವಿ.ವಿ. ಅರಕೇರಿ, ಕುಮಾರ ದೇಸಾಯಿ, ಬಸವರಾಜ ದೇಸಾಯಿ, ಡಾ. ಕೆ.ಎಚ್. ಮುಂಬಾರಡ್ಡಿ, ಉಮೇಶ ಮಲ್ಲಣ್ಣವರ, ಬಿ.ಡಿ. ಪಾಟೀಲ, ಎಚ್.ಬಿ. ಹರನಟ್ಟಿ, ರಮೇಶ ಯರಗಟ್ಟಿ, ಶಂಕರಗೌಡ ಪಾಟೀಲ, ಲಕ್ಷ್ಮಣ ಚಿಕದಾನಿ, ಕೆ.ಪಿ. ಶಿರಬೂರ, ಅಪ್ಪುಗೌಡ ಪಾಟೀಲ ಶೇಗುಣಸಿ, ವಿಠಲ ಶೇಬಾನಿ, ಶಂಕ್ರೆಪ್ಪ ಜನವಾಡ, ದುಂಡಪ್ಪ ಹಂಗರಗಿ, ಸುಬ್ಬನಗೌಡ ಪಾಟೀಲ, ಭೀಮನಗೌಡ ಪಾಟೀಲ, ಪ್ರಶಾಂತ ದೇಸಾಯಿ, ವಾಸು ಗಿರೆವ್ವಗೋಳ, ರವಿ ಬಿರಾದಾರ, ಅಶೋಕ ಕಬಾಡೆ, ನಾಗಪ್ಪ ದೇಸಾಯಿ, ರಾಮಸ್ವಾಮಿ ವಾಲಿಕಾರ ಮತ್ತಿತರರಿದ್ದರು.