ಕಾರ್ಮಿಕರೆಲ್ಲರಿಗೂ ಯೋಜನೆಗಳು ತಲುಪುತ್ತಿಲ್ಲ

Untitled-1
ಕೆಜಿಎಫ್​ನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ವಿವಿಧ ಸಲಕರಣೆಗಳ ಕಿಟ್​ಗಳನ್ನು ಶಾಸಕಿ ರೂಪಕಲಾ ಶಶಿಧರ್​ ವಿತರಿಸಿದರು.ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ತಾಲೂಕಿನ ನೂರಾರು ಕಾರ್ಮಿಕರು ಇದ್ದರು.
Published on

ಕೆಜಿಎಫ್ : ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇರುವಷ್ಟ್ಟು ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿ ಬೇರೆ ಎಲ್ಲಿಯೂ ಇಲ್ಲ. ಸರ್ಕಾರದ ಎಲ್ಲ ಯೋಜನೆಗಳೂ ಈ ಕಾರ್ಮಿಕರಿಗೆ ತಲುಪುತ್ತಿಲ್ಲ ಎಂಬ ಮಾಹಿತಿಮನಸ್ಸಿಗೆ ಬಹಳ ಬೇಸರ ತರಿಸಿದೆ ಎಂದು ಶಾಸಕಿ ರೂಪಕಲಾ ವಿಷಾದ ವ್ಯಕ್ತಪಡಿಸಿದರು.

ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸಲಕರಣೆಗಳ ಕಿಟ್​ಗಳನ್ನು ವಿತರಿಸಿ ಮಾತನಾಡಿದರು. ಪಂಚಾಯಿತಿವಾರು ಹಾಗೂ ಪ್ರತಿ ವಾರ್ಡ್​ಗೆ ಭೇಟಿ ನೀಡಿ ಪರಿಶೀಲಿಸಿ ಎಲ್ಲ ಸೌಲಭ್ಯಗಳು ಪ್ರತಿಯೊಬ್ಬ ಕಾರ್ಮಿಕನಿಗೆ ತಲಪುವಂತೆ ನೋಡಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಕಾರ್ಮಿಕರಾಗಿ ದುಡಿಯುವವರು ನಿತ್ಯ ದುಡಿದು ಸಂಪಾದಿಸುವ ಕೂಲಿಯೇ ಅವರಿಗೆ ಜೀವನ. ಅದರಿಂದಲೇ ತಮ್ಮ ಬೇಕು ಬೇಡಗಳನ್ನು ಈಡೇರಿಸಿಕೊಳ್ಳಬೇಕು ಎಂದ ಅವರು, ಕಾರ್ಮಿಕ ವೃತ್ತಿಯಲ್ಲಿ ಹಲವು ವಲಯಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಸರ್ಕಾರ ನೀಡುತ್ತಿರುವ ಬೆಂಬಲ ಬಹಳ ಪ್ರಶಂಸನೀಯ ಎಂದರು. ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೆ ಮಾಹಿತಿ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕೂಲಿ ಕಾರ್ಮಿಕರಲ್ಲಿ ಅನೇಕರು ಅವಿದ್ಯಾವಂತರಿದ್ದು ಮಾಹಿತಿ ಕೊರತೆಯಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಗುತ್ತಿರುವುದಿಲ್ಲ. ಅವರೆಲ್ಲರಿಗೂ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಪ್ರತಿ ಕಾರ್ಮಿಕನೂ ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಂಡು ಕಾರ್ಮಿಕ ಇಲಾಖೆ ವತಿಯಿಂದ ನೀಡುವ ಗುರುತಿನ ಚೀಟಿ ಪಡೆದುಕೊಳ್ಳಬೇಕು. ಇದರಿಂದ ಅಪಘಾತ ಪರಿಹಾರ, ವೈದ್ಯಕಿಯ ವೆಚ್ಚ, ಮಕ್ಕಳ ವಿದ್ಯಾಭ್ಯಾಸ, ಹೆರಿಗೆ ವೆಚ್ಚ ಹೀಗೆ ಸಾಕಷ್ಟ್ಟು ಯೋಜನೆಗಳಿದ್ದು ಎಲ್ಲವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇಲಾಖೆಯ ಮುಖಾಂತರ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುವುದು. ಎಲ್ಲರೂ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net