

ಕುಂದಾಪುರ: ದೃಷ್ಟಿ ಯೋಜನೆ ಜಿಲ್ಲೆಯಲ್ಲಿ 8 ಕಡೆ ಅನುಷ್ಠಾನವಾಗಿದ್ದು ಕುಂದಾಪುರದಲ್ಲಿ ಚಿಕನ್‌ಸಾಲ್ ರಸ್ತೆ, ಫೆರ‌್ರಿ ರಸ್ತೆಯಲ್ಲಿ ಅನುಷ್ಠಾನವಾಗಲಿದೆ. 50ರಷ್ಟು ಮನೆ, ಅಂಗಡಿ ಇತ್ಯಾದಿಗಳ ಸಮೂಹಕ್ಕೆ ಒಬ್ಬ ಕಾವಲುಗಾರನನ್ನು ನಿಯೋಜಿಸಿ ಪೊಲೀಸ್ ಇಲಾಖೆ ಮೇಲ್ವಿಚಾರಣೆ ನಡೆಸುತ್ತದೆ. ಕಾವಲುಗಾರನಿಗೆ ವೇತನವನ್ನು ಪರಿಸರದವರು ಒಟ್ಟುಗೂಡಿ ನೀಡಬೇಕು. ಯೋಜನೆಯಿಂದ ಅಪರಾಧ ಚಟುವಟಿಕೆ ಕಡಿಮೆಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಕುಂದಾಪುರದ ಕುಂದೇಶ್ವರ ದೇವಾಲಯ ವಠಾರದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರ ಜತೆಗೂಡಿ ಆರಂಭಿಸಿದ ನೂತನ ಯೋಜನೆ ‘ದೃಷ್ಟಿ’ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ 201 ಕಡೆ ಜಂಕ್ಷನ್, ಗಡಿ ರಸ್ತೆಗಳನ್ನು ಗುರುತಿಸಲಾಗಿದ್ದು ಅಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸಬಲ್ಲ ಸಾಮರ್ಥ್ಯದ ಹಾಗೂ ಕಣ್ಗಾವಲಿನ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಸಹಕಾರದಲ್ಲಿ 3 ತಿಂಗಳ ಒಳಗೆ ಈ ಕಾರ್ಯ ನಡೆಯಲಿದ್ದು ನವೆಂಬರ್ 1ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಟಿಎಪಿಸಿಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ವಿಎಸ್‌ಎಸ್ ಅಧ್ಯಕ್ಷ ಕೃಷ್ಣಮೂರ್ತಿ ಕುಂದಾಪುರ, ಪುರಸಭೆ ಸದಸ್ಯ ಗಿರೀಶ್ ಜಿ.ಕೆ. ಉಪಸ್ಥಿತರಿದ್ದರು.
ನಗರ ಠಾಣೆ ಎಸ್‌ಐ ನಂಜಾ ನಾಯ್ಕ ಸ್ವಾಗತಿಸಿದರು. ಕುಂದಾಪುರ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾರ ಠಾಣೆ ಎಸ್‌ಐ ನೂತನ್ ವಂದಿಸಿದರು. ಸಿಬ್ಬಂದಿ ಮಧುಸೂದನ್ ಕಾರ್ಯಕ್ರಮ ನಿರ್ವಹಿಸಿದರು.