

ವಿಜಯವಾಣಿ ಸುದ್ದಿಜಾಲ ಉಡುಪಿ
ಉತ್ತಮ ಕಲೆಗೆ ಯಾವುದೇ ಒಳದಾರಿಗಳಿಲ್ಲ. ಕಠಿಣ ಪರಿಶ್ರಮ ಮತ್ತು ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮೂಲಕ ಉತ್ತಮ ಕಲಾವಿದನಾಗಬಹುದು. ವಿದ್ಯಾರ್ಥಿಗಳು ಇತರರ ನೋವು-ನಲಿವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಮಣಿಪಾಲದ ಕಲಾವಿದೆ, ಉದ್ಯಮಿ ವನಿತಾ ಪೈ ಅಭಿಪ್ರಾಯಪಟ್ಟರು.
ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಸ್ವ-ಕೃತಿ ಉದ್ಘಾಟಿಸಿ ಮಾತನಾಡಿದರು.
ಸೃಜನಶೀಲ ಉದ್ಯಮಗಳಲ್ಲಿ ಕಲಾ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿವೆ. ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಮತ್ತು ತಮ್ಮ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಭಾರತದಲ್ಲಿ ಉತ್ತಮ ಕಲಾವಿದರಿದ್ದಾರೆ. ಉತ್ತಮ ಕಲಾ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಇತರರು ಪ್ರದರ್ಶನ ವೀಕ್ಷಿಸಿದರು.
ಎಸ್ಥೆಟಿಕ್ಸ್, ಇಕಾಸೊಫಿ, ಪೀಸ್ ಮತ್ತು ಮೀಡಿಯಾ ವಿದ್ಯಾರ್ಥಿಗಳಾದ ಶ್ರವಣ್ ಬಾಸ್ರಿ (ಛಾಯಾಗ್ರಹಣ- ತೆಯ್ಯಂ), ಚಿನ್ಮಯಿ ಬಾಲ್ಕರ್ (ಕಾವ್ಯದ ಮೇಲಿನ ವರ್ಣಚಿತ್ರ), ವೆಲಿಕಾ (ವಿನ್ಯಾಸ), ಆಕರ್ಷಿಕಾ ಸಿಂಗ್ (ಕವನ), ಡೆಸ್ಮಂಡ್ ದಾಸ್ (ಅವಿಭಜಿತ ದಕ್ಷಿಣ ಕನ್ನಡದ ಪ್ರವಾಸ ಪುಸ್ತಕ), ಸಂಪದ ಭಾಗವತ (ಕಿರು ಚಲನಚಿತ್ರ)-ಇವರು ತಮ್ಮ ಪ್ರಾಜೆಕ್ಟ್ಗಳ ಪ್ರದರ್ಶನ ನಡೆಸಿಕೊಟ್ಟರು.
ವಿದ್ಯಾರ್ಥಿಗಳಲ್ಲಿರುವ ಅಪಾರ ಸಾಮರ್ಥ್ಯ ಅವರ ಪ್ರಾಜೆಕ್ಟ್ಗಳಲ್ಲಿ ಪ್ರತಿಫಲಿಸುತ್ತಿದೆ. ವಿಭಾಗದ ಇಂತಹ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಲ್ಲದೆ, ಇಂತಹ ಪ್ರಾಜೆಕ್ಟ್ಗಳು ಅವರನ್ನು ಪ್ರೋತ್ಸಾಹಿಸುತ್ತವೆ. ಪ್ರೊ.ವರದೇಶ್ ಹಿರೇಗಂಗೆ. ಮುಖ್ಯಸ್ಥ, ಜಿಸಿಪಿಎಎಸ್.